ಸುದ್ದಿಮೂಲವಾರ್ತೆ
ಕೊಪ್ಪಳ ಜು 15:ಒಂದು ಕಡೆ ತರಕಾರಿ ದರ ಗಗನಕ್ಕೇರಿದೆ. ಅದರಲ್ಲಿ ಟೊಮೆಟೊ, ಹಸಿಮೆಣಸಿನಕಾಯಿ ದರ ನೂರು ಗಡಿ ದಾಟಿದೆ. ಈ ಮಧ್ಯೆ ಸರಕಾರ ಅಂಗನವಾಡಿಗಳಲ್ಲಿ ನೀಡುವ ಆಹಾರದಲ್ಲಿ ಬಳಸುವ ತರಕಾರಿ ದರ ತೀರಾ ಕಡಿಮೆ ಮಾಡಿದೆ. ಪ್ರತಿ ಮಗು ಹಾಗು ಗರ್ಭಿಣಿಯರಿಗೆ ಕೇವಲ ಒಂದರಿಂದ ಒಂದುವರೆ ರೂಪಾಯಿ ನಿಗಿದಿ ಮಾಡಿದೆ. ಈ ಹಣದಲ್ಲಿ ತರಕಾರಿ ಖರೀದಿಸಿ ಅಡುಗೆ ತಯಾರಿಸಿ ಕೊಡುವುದು ಕಷ್ಟ ಎನ್ನಲಾಗಿದೆ. ಅಡುಗೆ ತಯಾರಿಸುವ ಅಂಗನವಾಡಿ ಸಹಾಯಕಿಯರು ಹಾಗು ಕಾರ್ಯಕರ್ತೆಯರು ಪೇಚಾಡುವಂತಾಗಿದೆ
ರಾಜ್ಯದಲ್ಲಿರುವ ಅಂಗನವಾಡಿಗಳಲ್ಲಿ ಬಾಣಂತಿ, ಗರ್ಭಿಣಿಯರು ಹಾಗು 3 ರಿಂದ 6ವರೆಗಿನ ಮಕ್ಕಳಿಗೆ ಅಪೌಷ್ಠಿಕತೆ ಕಡಿಮೆ ಮಾಡುವ ಉದ್ದೇಶದಿಂದ ಪೌಷ್ಠಿಕ ಆಹಾರ ನೀಡುವ ಯೋಜನೆ ಜಾರಿಯಲ್ಲಿದೆ. ನಿತ್ಯ ಅನ್ನದ ಜೊತೆಗೆ ಬೇರೆ ಬೇರೆ ಆಹಾರ ನೀಡಲು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಪೌಷ್ಠಿಕ ನಿವಾರಣೆ ಸಮಿತಿ ಇದೆ. ಈ ಸಮಿತಿಯು ಪ್ರತಿ ಆರು ತಿಂಗಳಿಗೊಮ್ಮೆ ಸಬೆ ನಡೆಸಿ ಅಂಗನವಾಡಿಗಳಲ್ಲಿಯ ಆಹಾರ ಧಾನ್ಯದ ದರ ಹಾಗು ಅಂಗನವಾಡಿಗಳಲ್ಲಿ ಯಾವ ಯಾವ ದಿನ ಏನೇನು ಆಹಾರ ನೀಡಬೇಕೆಂದು ನಿರ್ಧರಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ದರ ಪಟ್ಟಿ ನೀಡಿರುತ್ತಾರೆ. ಅದರಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇ 12 ರಂದು ಸಭೆ ನಡೆಸಿ ವಿವಿಧ ಧಾನ್ಯ ಹಾಗು ತರಕಾರಿಯ ದರ ನಿಗಿದಿ ಮಾಡಿದೆ. ಅದರಲ್ಲಿ ತರಕಾರಿಯ ದರವನ್ನು ತಲಾಯೊಬ್ಬರಿಗೆ 1 ರಿಂದ 1.50 ರೂಪಾಯಿ ನಿಗಿದಿ ಮಾಡಿದೆ.
ವಾರದಲ್ಲಿ ಆರು ದಿನಗಳಲ್ಲಿ ಊಟ ನೀಡುತ್ತಿದ್ದು ಅದರಲ್ಲಿ ಸೋಮುವಾರ, ಬುಧುವಾರ ಹಾಗು ಶುಕ್ರವಾರ ಅನ್ನ ಸಾಂಬಾರ, ಈ ಸಂದರ್ಭದಲ್ಲಿ ಸಾಂಬಾರ ಬಳಸಲು ಪ್ರತಿಯೊಬ್ಬರಿಗೆ 1.50 ರೂಪಾಯಿಯಲ್ಲಿ ತರಕಾರಿ ಖರೀದಿ ರುಚಿಕಟ್ಟಾದ ಸಾಂಬಾರ ತಯಾರಿಸಬೇಕು. ಇನ್ನೂ ಮಂಗಳವಾರ ಚಿತ್ರಾನ್ನ, ಗುರುವಾರ ಕಿಚಡಿ ಮತ್ತು ಶನಿವಾರ ಉಪ್ಪಿಟ್ಟು ನೀಡಬೇಕು. ಈ ಮೂರು ದಿನವು ಅಡುಗೆಯಲ್ಲಿ 1 ರೂಪಾಯಿ ತರಕಾರಿಯನ್ನು ತಲಾವಾರು ಖರ್ಚು ಮಾಡಬೇಕೆಂದು ಸೂಚಿಸಿದೆ.
ಈ ಹಿಂದೆ ಈ ದರಕ್ಕೆ ಹೇಗೊ ಹೊಂದಾಣಿಕೆ ಮಾಡಲಾಗುತ್ತಿತ್ತು. ಆದರೆ ಈಗ ಟೊಮೆಟೊ 100-150 ರುಪಾಯಿ ಹಾಗು ಹಸಿಮೆಣಸಿನಕಾಯಿ 100 ರೂಪಾಯಿ ಪ್ರತಿ ಕೆಜಿಗೆ ಆಗಿದೆ. ಇದರೊಂದಿಗೆ ಇತರ ತರಕಾರಿ ದರವು ಹೆಚ್ಚಳವಾಗಿದೆ. ಈ ದರದಲ್ಲಿ ತರಕಾರಿ ಹಾಕಿ ಅಡುಗೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಆದರೂ ಇಲಾಖೆ ಸೂಚಿಸಿದಂತೆ ಗರ್ಭೀಣಿಯರು ಹಾಗು ಬಾಣಂತಿಯರಿಗೆ ನಿಗಿದಿ ಮಾಡಿದಂತೆ ನೀಡಲು ಹೆಣಗಾಡುತ್ತಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು.
ರಾಜ್ಯದಲ್ಲಿ ಒಟ್ಟು 70 ಸಾವಿರ ಅಂಗನವಾಡಿಗಳಿಗೆ. ಅವುಗಳಲ್ಲಿ 3.75 ಲಕ್ಷ ಗರ್ಭಿಣಿಯರು, 3.68 ಲಕ್ಷ ಬಾಣಂತಿಯರಿದ್ದಾರೆ. ಇನ್ನೂ ಕೊಪ್ಪಳ ಜಿಲ್ಲೆಯಲ್ಲಿ 1850 ಅಂಗನವಾಡಿ ಕೇಂದ್ರ ಗಳಿದ್ದು ಅವುಗಳಲ್ಲಿ 170231 ಜನ ಗರ್ಭೀಣಿಯರು, ಮಕ್ಕಳು ಹಾಗು ಬಾಣಂತಿಯರಿದ್ದಾರೆ. ಈ ಮಕ್ಕಳು, ಗರ್ಭೀಣಿಯರು ಹಾಗು ಬಾಣಂತಿಯರಿಗೆ ಆಹಾರ ನೀಡಲು ಹೆಣಗಾಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಸರಕಾರ ಈ ಕುರಿತು ಪರಿಶೀಲಿಸಿ ದರ ಹೆಚ್ಚಿಸಬೇಕು. ಇಲ್ಲದಿದ್ದರೆ ಅಂಗನವಾಡಿಗಳಲ್ಲಿಯ ಆಹಾರ ತರಕಾರಿ ಇಲ್ಲದೆ ಸಪ್ಪೆಯಾಗಿರುತ್ತದೆ.