ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.14: ದಾಖಲೆ ಇಲ್ಲದೆ ಕೊಂಡೊಯ್ಯುತ್ತಿದ್ದ 1 ಕೋಟಿ ರೂ. ನಗದು ಹಣವನ್ನು ನಗರದ ಹಲಸೂರು ಗೇಟ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯದಲ್ಲಿದ್ದು, ಯಾವುದೇ ದಾಖಲೆ ಇಲ್ಲದೆ ಬ್ಯಾಗ್ನಲ್ಲಿ ವ್ಯಕ್ತಿಯೊಬ್ಬರು ಆಟೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಟೋ ಕೆಟ್ಟುನಿಂತಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಆಟೋದಲ್ಲಿದ್ದ ಪ್ರವೀಣ್ ಹಾಗೂ ಸುರೇಶ್ ಎಂಬ ಇಬ್ಬರು ವ್ಯಕ್ತಿಗಳನ್ನು ಆಟೋದಿಂದ ಕೆಳಗಿಳಿಸಿ ಪರಿಶೀಲನೆ ನಡೆಸಿದ್ದಾರೆ. ಆಗ ಬ್ಯಾಗ್ನಲ್ಲಿ ಕಂತೆಕಂತೆ ನೋಟುಗಳು ಕಂಡುಬಂದಿವೆ. ಹಣದ ಬಗ್ಗೆ ವಿವರಣೆ ಕೇಳಿದಾಗ ಇಬ್ಬರೂ ತಡಬಡಾಯಿಸಿದ್ದಾರೆ. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಬ್ಯಾಗ್ನಲ್ಲಿ ಸುಮಾರು ಒಂದು ಕೋಟಿ ರೂ. ಮೊತ್ತ ಪತ್ತೆಯಾಗಿದೆ. ಹೀಗೆ ಹಣಕ್ಕೆ ಯಾವುದೇ ದಾಖಲೆ ಸಿಗದ ಕಾರಣ ಪೊಲೀಸರು ಐಟಿ ಅಧಿಕಾರಿಗಳಿಗೂ ಸಹ ವಿಷಯ ತಿಳಿಸಿದ್ದಾರೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಚಿಕ್ಕಪೇಟೆ ನೋಡಲ್ ಅಧಿಕಾರಿ ಮನೋಜ್ ಮಿಶ್ರಾ, ಈಗಾಗಲೇ ನಮ್ಮ ಪ್ರಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆರೋಪಿಗಳ ವಿಚಾರಣೆ ಪೊಲೀಸರ ನಡೆಸಲಿದ್ದಾರೆ. ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಐಟಿ ಅಧಿಕಾರಿಗಳಿಗೆ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.