ಸುದ್ದಿಮೂಲ ವಾರ್ತೆ
ಮೈಸೂರು, ಅ.6:ಮೈಸೂರು ದಸರಾ ಎಷ್ಟೊಂದು ಸುಂದರ….
ಹೇಳಿ. ಕೇಳಿ ಮೈಸೂರು ಅರಮನೆ ನಿರಾಭರಣಾ ಸುಂದರಿ. ಇನ್ನು ಅಲಂಕಾರ ಮಾಡಿದರೇ ಕೇಳಬೇಕೇ…ನಾಡ, ದಸರಾ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯನ್ನು ಮತ್ತಷ್ಟು ಸುಂದರಗೊಳಿಸಿ, ಅಪ್ರತಿಮ ಸುಂದರಿಯನ್ನಾಗಿ ಮಾಡಲಾಗುತ್ತಿದೆ. ಅರಮನೆ ಒಳಗೂ- ಹೊರಗೂ ಅರಮನೆ ಎಂಬ ಸುಂದರಿ ಸರ್ವಾಲಂಕೃತಳಾಗಿ ನೋಡಗರ ಮನಸನ್ನು ಸೂಜಿಗಲ್ಲಿನಂತೆ ಮತ್ತಷ್ಟು ಸೆಳೆಯಲು ರೆಡಿ ಆಗುತ್ತಿದ್ದಾಳೆ.
ಹೀಗೆ, ದಸರಾ ಅಂಗವಾಗಿ ನಡೆಯುವ ವಿಜಯ ದಶಮಿಗೆ ಅರಮನೆ ನಗರಿ ಸಜ್ಜಾಗ್ತಿದೆ. ಅರಮನೆ ಸೇರಿದಂತೆ ನಗರದ ನಾನಾ ಕಡೆ ಸಿದ್ಧತಾ ಕೆಲಸಗಳು ಭರದಿಂದ ಸಾಗಿವೆ. ಅರಮನೆಯೊಳಗಿನ ಅಂಬಾವಿಲಾಸ ಅರಮನೆಗೆ ಹಾಗೂ ಸುತ್ತಿನ ಭದ್ರಕೋಟೆಗೂ ಬಣ್ಣ ಹಾಕಿ ಸಿಂಗಾರಗೊಳಿಸಲಾಗುತ್ತಿದೆ. ಚಾಮುಂಡಿ ಬೆಟ್ಟದ ಮೇಲೆ ಮೈಸೂರು ನಗರಾಭಿಮುಖವಾಗಿ ವಿದ್ಯುತ್ ದೀಪಗಳಿಂದ ಮಾಡಿದ ಸುಸ್ವಾಗತ ಫಲಕವನ್ನು ನಿರ್ಮಿಸಲಾಗುತ್ತಿದೆ.
ಜಂಬೂ ಸವಾರಿ ಹೋಗುವ ಮಾರ್ಗದಲ್ಲಿ ಮಾತ್ರವೇ ಅಲ್ಲ ನಗರದ ಪ್ರಮುಖ ವೃತ್ತ, ರಸ್ತೆಗಳ ಉದ್ದಕೂ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಜಗಮಗಿಸುವ ದೀಪಾಲಂಕಾರ ನವೆಂಬರ್ 1 ರವರೆಗೂ ಇರುತ್ತದೆ. ದಸರಾ ಮಹೋತ್ಸವದ ದೀಪಾಲಂಕಾರಕ್ಕಾಗಿ ಸೆಸ್ಕ್ ನಿಂದ ಒಟ್ಟು 6.3 ಕೋಟಿ ರು. ವೆಚ್ಚ ಮಾಡಲಾಗುತ್ತಿದ್ದು, 135 ಕಿ,.ಮೀ. ಉದ್ದದ ರಸ್ತೆಗೆ ದೀಪಾಲಂಕಾರ ಮಾಡಲಾಗುತ್ತಿದೆ.
1 ಲಕ್ಷ ಬಲ್ಬುಗಳ ಬಳಕೆ
ಅರಮನೆ ಕಟ್ಟಡಕ್ಕೆ ಶಾಶ್ವತವಾಗಿ ಮಾಡಿರುವ ದೀಪಾಲಂಕಾರದಲ್ಲಿ ಹಾಳಾಗಿರುವ ಸುಮಾರು 20 ಸಾವಿರಕ್ಕೂ ಹೆಚ್ಚು ಬಲ್ಬ್ ಬದಲಿಸುವ ಕಾರ್ಯದಲ್ಲಿ ಅರಮನೆ ಸಿಬ್ಬಂದಿ ಒಳಗೊಂಡಂತೆ ಎಲೆಕ್ಟ್ರಿಷಿಯನ್ಗಳು ತೊಡಗಿದ್ದಾರೆ.
ಅರಮನೆ ಮುಖ್ಯ ಕಟ್ಟಡ, ಪ್ರವೇಶದ್ವಾರ, ವಿವಿಧ ಗೋಡೆ ಮೇಲೆ ಅಳವಡಿಸಿರುವುದೂ ಸೇರಿ ಒಟ್ಟು 1 ಲಕ್ಷ ಬಲ್ಬ್ ಬೆಳಕು ಝಗಮಗಿಸಿ ಅರಮನೆ ಸೌಂದರ್ಯ ವೃದ್ಧಿಸುತ್ತದೆ. ಆದರೆ, ಪ್ರತಿದಿನ ಪಾರಿವಾಳಗಳು ಹಾರಾಡುವಾಗ, ಜೋರಾಗಿ ಗಾಳಿ ಬೀಸಿದಾಗ, ದೀಪಾಲಂಕಾರದ ವೇಳೆ ಮಳೆ ಬಂದಾಗ ಕೆಲವು ಬಲ್ಬ್ಗಳು ಸಿಡಿದುಹೋಗುತ್ತವೆ. ಇದರಿಂದ ಪ್ರತಿ ವರ್ಷ ದಸರಾ ವೇಳೆ 15 ರಿಂದ 20 ಸಾವಿರ ಬಲ್ಬ್ ಹಾನಿಗೀಡಾಗುತ್ತವೆ.
ದೆಹಲಿ, ಕಲ್ಕತ್ತದಲ್ಲಿ ವಿಶೇಷವಾಗಿ ತಯಾರಾಗುವ ಬಲ್ಬ್ ತರಿಸಲಾಗಿದೆ. ಸ್ವರ್ಣ ಬಣ್ಣದ ಬಲ್ಬ್ಗಳು ಅರಮನೆ ಅಂದಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು, ಭೀಮಾ, ಮಹೇಂದ್ರ, ಧನಂಜಯ ಹಾಗೂ ಗೋಪಿ ಆನೆಗೆ 500 ರಿಂದ 550 ಕೆ.ಜಿ ಭಾರ ಹೊರಿಸಿ ತಾಲೀಮು ನಡೆಸಲಾಗಿದೆ. ಇದೀಗ ಶೇ.75ರಷ್ಟು ಭಾರ ಹೊರುವ ತಾಲೀಮನ್ನು ಅಭಿಮನ್ಯು, ಮಹೇಂದ್ರ ಹಾಗೂ ಧನಂಜಯನಿಗೆ ನಡೆಸಲಾಗುತ್ತಿದೆ. ಗಜಪಡೆ 3 ಹಂತದ ಕುಶಾಲುತೋಪಿನ ತಾಲೀಮಿಗೆ ಅಣಿಯಾಗಿವೆ.
ಸರಳ ದಸರಾ ಆಚರಣೆ ಲಕ್ಷಣಗಳಿಲ್ಲ
ರಾಜ್ಯ ಸರ್ಕಾರ ಮಳೆ ಇಲ್ಲದ ಕಾರಣ ಬರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಸರಳವೂ ಅಲ್ಲ. ಅದ್ಧೂರಿಯೂ ಅಲ್ಲ. ಸಾಂಪ್ರದಾಯಿಕ ದಸರಾ ಎಂದು ಘೋಷಣೆ ಮಾಡಿದೆ. ಆದರೆ. ಈ ಸಿದ್ದತೆಗಳನ್ನು ಗಮನಿಸಿದರೆ ಸರಳ ಆಚರಣೆಯ ಲಕ್ಷಣ ಕಂಡುಬರುತ್ತಿಲ್ಲ.
ಅರಮನೆಯೊಳಗೆ ಈಗಾಗಲೇ ಖಾಸಗಿ ದರ್ಬಾರ್ ( ಅರಮನೆ ಒಳಗೆ ಆಚರಿಸುವ ಅತ್ಯಂತ ಸಂಪ್ರದಾಯ ಬದ್ಧ ದಸರಾ) ಆಚರಿಸಲು ನಾವು ಸಿದ್ದತೆ ನಡೆಸಿದ್ದೇವೆ. ಇನ್ನೂ ಅರಮನೆ ಹೊರಗಿನ ದಸರಾ ಆಚರಣೆ ಹಿನ್ನೆಲೆಯಲ್ಲಿ ಅರಮನೆ ಸೇರಿದಂತೆ ನಗರಾದ್ಯಂತ ಸಿದ್ದತೆ ಕೆಲಸಗಳನ್ನು ಸರ್ಕಾರ ಭರದಿಂದ ನಡೆಸುತ್ತಿದೆ. ಸರಳ, ಅದ್ದೂರಿ ಬಗ್ಗೆ ನನಗೇನು ಗೊತ್ತಿಲ್ಲ.
ಪ್ರಮೋದದೇವಿ, ರಾಜಚಂಶಸ್ಥೆ.