ಸುದ್ದಿಮೂಲ ವಾರ್ತೆ
ಮೈಸೂರು, ಮಾ.25: ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶ ಭಾನುವಾರ (ಮಾ.25) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿದೆ. ಈಗಾಗಲೇ ಮೈಸೂರಿನಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದ ಸಿದ್ದತೆ ಬಹುತೇಕ ಪೂರ್ಣವಾಗಿದ್ದು, ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ತಿಳಿಸಿದ್ದಾರೆ. ರಿಂಗ್ ರಸ್ತೆಯಿಂದ ರೋಡ್ ಶೋ: ಸಮಾರಂಭಕ್ಕೂ ಮೊದಲು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆಯಿಂದ ಬೃಹತ್ ರೋಡ್ ಶೋ ನಡೆಯಲಿದೆ. ಈ ರೋಡ್ ಶೋನಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರು ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಎಲ್ಲ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಸಮಾವೇಶ ಆಗಿರುವ ಈ ಜೆಡಿಎಸ್ ಹಬ್ಬದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಮಾವೇಶಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ವಿಶಾಲ ಮೈದಾನದಲ್ಲಿ ಕೂರಲು ಆಸನದ ವ್ಯವಸ್ಥೆ, ಊಟ ಹಾಗೂ ಕುಡಿಯುವ ನೀರಿನ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. ವಿಶೇಷ ವೇದಿಕೆ: ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಝಗಮಗಿಸುವ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿದ್ದು, 100×50 ಅಡಿಯ ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ವೇದಿಕೆಗೆ ಅಚ್ಚುಕಟ್ಟಾದ ವಿದ್ಯುತ್ ದೀಪದ ಮೆರಗು ನೀಡಲಾಗಿದ್ದು, ಮೈದಾನದ ಯಾವುದೇ ಭಾಗದಿಂದಲೂ ವೇದಿಕೆ ಕಾರ್ಯಕ್ರಮ ನೋಡಲು ಸಾಧ್ಯ ಆಗುವಂತೆ ಬೃಹತ್ ಎಲ್ ಇ ಡಿ ಪರದೆಗಳನ್ನು ಅಳವಡಿಸಲಾಗಿದೆ. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದ ತಪ್ಪಲಲ್ಲಿ ನಡೆಯುತ್ತಿರುವ ಪಂಚರತ್ನ ಸಮಾರೋಪ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು, ಕಾರ್ಯಕರ್ತರು ಬರುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಈ ಜೆಡಿಎಸ್ ಹಬ್ಬಕ್ಕೆ ಭರ್ಜರಿ ಜನ ಸ್ಪಂದನೆ ಸಿಗುತ್ತಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ಕಳೆದ ವರ್ಷದ ನವೆಂಬರ್ 18ರಿಂದ ಮಾರ್ಚ್ 24ರವರೆಗೆ ಪಂಚರತ್ನ ರಥಯಾತ್ರೆ ನಡೆಸಿದ್ದೇನೆ. ಎಲ್ಲೆಡೆ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ಸಮಾರೋಪ ಸಮಾವೇಶ ಅಷ್ಟೇ ಯಶಸ್ಸು ಕಾಣುತ್ತದೆ ಎಂಬ ವಿಶ್ವಾಸ ನನ್ನದು ಎಂದು ಅವರು ಹೇಳಿದ್ದಾರೆ ಸಮಾವೇಶಕ್ಕೆ ಹೈಟೆಕ್ ಸ್ಪರ್ಶ: ಸಮಾವೇಶ ನಡೆಯುವ ವಿಶಾಲ ವೇದಿಕೆಗೆ ಡಿಜಿಟಲ್ ಸ್ಕ್ರೀನ್ ಬ್ಯಾನರ್ ಅಳವಡಿಸಲಾಗಿದ್ದು, ಅದರಲ್ಲಿ ಪಂಚರತ್ನ ಕಾರ್ಯಕ್ರಮಗಳು ನಿರಂತರವಾಗಿ ಮೂಡಿಬರುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮೈದಾನದ ತುಂಬೆಲ್ಲಾ ಕಟೌಟ್ ಹಾಗೂ ಬ್ಯಾನರ್ಗಳು ರಾರಾಜಿಸುತ್ತಿವೆ. ಯಾವುದೇ ಲೋಪ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ಸಂಜೆ ಮೈಸೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಅವರು ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು. ಈಗಾಗಲೇ ಜೆಡಿಎಸ್ ಪಕ್ಷದ ರಾಜ್ಯ ಮಟ್ಟದ ನಾಯಕರು, ಶಾಸಕರು, ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳು ಮೈಸೂರು ತಲುಪಿದ್ದಾರೆ. ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು, ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್ ಶಕ್ತಿ, ಸಾಮರ್ಥ್ಯದ ಅನಾವರಣವು ಇಡೀ ರಾಷ್ಟ್ರದ ಗಮನ ಸೆಳೆದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಹೆಜ್ಜೆ ಇರಿಸಿದ್ದಾರೆ.