ಸುದ್ದಿಮೂಲವಾರ್ತೆ
ಕೊಪ್ಪಳ ಸೆ 15: ಕೊಪ್ಪಳ ನಗರಸಭೆಯಿಂದ 2000 ಮನೆಗಳನ್ನು ನೀಡುವ ಯೋಜನೆಯಲ್ಲಿ ನಿವೇಶನಗಳಿಗೆ ಮೂಲಭೂತ ಸೌಲಭ್ಯಕ್ಕಾಗಿ ಇನ್ನೂ 100 ಕೋಟಿ ರೂಪಾಯಿ ಬೇಕಾಗಿದೆ. ನಗರಾಭಿವೃದ್ದಿ ಸಚಿವ ಜಮೀರ್ ಅಹ್ಮದರಿಗೆ ಹಣ ಬಿಡುಗಡೆಗಾಗಿ ಒತ್ತಾಯಿಸಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮೇದಾರ ಸಮಾಜದ 36 ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಿ ಮಾತನಾಡಿದರು. ಹಲವು ವರ್ಷಗಳ ಹಿಂದೆ ಆರಂಭವಾದ 2000 ಮನೆಗಳ ವಿತರಣೆ ಕಾರ್ಯಕ್ಕೆ ಸಕಾಲಕ್ಕೆ ಹಂಚಿಕೆಯಾಗದೆ. ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕಿನವರು ಮುಂದೆ ಬಾರದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದೆ. ಈಗಾಗಲೇ 1500 ಕ್ಕೂ ನಿವೇಶನಗಳ ಹಕ್ಕು ಪತ್ರ ವಿತರಿಸಲಾಗಿದೆ. ಉಳಿದ 400ಕ್ಕೂ ಅಧಿಕ ನಿವೇಶನಗಳನ್ನು ಅರ್ಹರಿಗೆ ವಿತರಿಸಲಾಗುವುದು. ಇಲ್ಲಿಯ ಮೂಲಭೂತ ಸೌಲಭ್ಯಕ್ಕಾಗಿ ಹೆಚ್ಚುವರಿ ಅನುದಾನ ಬೇಕಾಗಿದೆ. ಈ ನಿಟ್ಟಿನಲ್ಲಿ ಸಚಿವ ಜಮೀರ್ ಅಹ್ಮದರನ್ನು ಕೊಪ್ಪಳ ಆಹ್ವಾನಿಸಿ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಶ್ರೀಮತಿ ಶಿವಗಂಗಾ ಭೂಮಕ್ಕನವರ ಬಡವರಿಗೆ ಸೂರು ಕಲ್ಪಿಸುವ ಈ ಯೋಜನೆಯನ್ನು ಬೇಗನೇ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಲಾಗುವುದು. ಈ ಕುರಿತು ಶಾಸಕರ ಪ್ರಯತ್ನ ಬಹಳಷ್ಟು ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರನ್ನು ನಗರಸಭೆಯಿಂದ ಸನ್ಮಾನಿಸಲಾಯಿತು. ಮೇದಾರ ಸಮಾಜಕ್ಕೆ ನಿವೇಶನಕ್ಕಾಗಿ ಹಲವು ಬಾರಿ ಹೋರಾಟ ಮಾಡಿದ್ದರು. ಈಗ ಅವರಿಗೆ ನಿವೇಶನ ನೀಡಿದ್ದು ಮೇದಾರರಿಗೆ ಖುಷಿ ನೀಡಿದೆ.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾ ರುಬಿನಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಲ್ಲಮ್ಮ . ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ ಸೇರಿ ಹಲವರು ಇದ್ದರು.