ಬೆಂಗಳೂರು, ಜು,3; ಪರಿಶಿಷ್ಟ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸಂವಿಧಾನಬದ್ಧವಾಗಿ ಮೀಸಲಿಟ್ಟಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ.
ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಿಗೆ ಈ ಹಣ ಬಳಕೆ ಮಾಡುವ ನಿರ್ಧಾರವನ್ನು ಶನಿವಾರದೊಳಗಾಗಿ ಕೈಬಿಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ಎಸ್.ಸಿ, ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಪುರುಷೋತ್ತಮ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ನಿಗದಿ ಮಾಡಿರುವ ಹಣವನ್ನು ಬೇರೆ ಕಡೆ ವರ್ಗಾವಣೆ ಮಾಡುವುದು ಕಾನೂನು ಬಾಹಿರ. ಇದು ದಲಿತ ವಿರೋಧಿ ನೀತಿಯಾಗಿದ್ದು, ಸರ್ಕಾರದ ನಿರ್ಧಾರ ಬದಲಾಗದಿದ್ದರೆ ಶನಿವಾರದಂದು ಫ್ರೀಡಂ ಪಾರ್ಕ್ ನಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ಎಸ್ ಸಿ ಪಿ ಮತ್ತು ಟಿಎಸ್ ಪಿ ಅನುದಾನ ದುರುಪಯೋಗ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಯೋಜನೆಗಳ ಅನುದಾನ ದುರ್ಬಳಕೆ ಸರಿಯಲ್ಲ. ಭರವಸೆಗಳನ್ನು ಈಡೇರಿಸಲು ಬೇರೆ ಹಣ ಬಳಸಿಕೊಳ್ಳಬೇಕು. ಹದಿನಾಲ್ಕು ಬಜೆಟ್ ಮಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇಂತಹ ದ್ರೋಹವನ್ನು ನಿರೀಕ್ಷಿಸಿರಲಿಲ್ಲ. ಗ್ಯಾರಂಟಿ ಅನುಷ್ಠಾನಕ್ಕಾಗಿ ಹಣ ಬಳಕೆ ಮಾಡುತ್ತಿರುವುದರಿಂದ ಅಭಿವೃದ್ದಿಯಲ್ಲಿ ಹಿನ್ನೆಡೆಯಾಗುತ್ತಿದ್ದು, ಸರ್ಕಾರದ ನಡೆಯಿಂದ ಹೊಸ ಹೂಡಿಕೆದಾರರು ರಾಜ್ಯದಿಂದ ಹೊರ ಹೋಗಬಹುದು. ಸರ್ಕಾರ ಉದ್ಯೋಗ, ಶಿಕ್ಷಣ, ಆರೋಗ್ಯದ ಕಡೆ ಒತ್ತು ಕೊಡಬೇಕು ಎಂದರು.
ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಸುರೇಶ ರಾಥೋಡ್ ಮಾತನಾಡಿ, ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ ಅತ್ಯಂತ ಗಂಭೀರವಾದ ವಿಚಾರವಾಗಿದ್ದು, ಕಾವಾಡಿಗರ ಕಾಲೋನಿಯಲ್ಲಿ ನಡೆದಿರೋ ಘಟನೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಮಾಹಿತಿ ಸಂಗ್ರಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಹೋರಾಟ ಮಾಡುತ್ತೇವೆ ಎಂದರು.
ಮುಂದುವರಿದು ಮಾತನಾಡಿದ ಪಕ್ಷದ ಉಪಾಧ್ಯಕ್ಷ ಸುರೇಶ್ ರಾಥೋಡ್ ಹೇಳುವುದು ಒಂದು ಮಾಡುವುದು ಇನ್ನೊಂದು ಕಾಂಗ್ರೆಸ್ ಸರ್ಕಾರದ ಪರಿಪಾಠ. ಈ ಬಗ್ಗೆ ರಾಜ್ಯ ವ್ಯಾಪಿ ಹೋರಾಟವನ್ನು ರೂಪಿಸುತ್ತೇವೆ. ಇದೇ ತಿಂಗಳ ಆಗಸ್ಟ್ 5 ಶನಿವಾರದಂದು ನಗರದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ದಲಿತ ನೀತಿಯ ವಿರುದ್ಧ ಹೋರಾಟ ಮಾಡಲಿದ್ದೇವೆ. ನಮ್ಮ ಪ್ರತಿಭಟನೆಗೆ ಅನೇಕ ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.