ಶಿಗ್ಗಾಂವ, ಮಾ.27: ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕಲ್ಯಾಣ ಗ್ರಾಮದ ಜಿಟಿಟಿಸಿ ನಿವೇಶನದ ಬಳಿ ಆಯೋಜಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹಾಗೂ ಕಲ್ಯಾಣ ಗ್ರಾಮದಲ್ಲಿ ನೂತನ ತರಬೇತಿ ಸಂಕೀರ್ಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಮಾಹಿತಿ ಪ್ರಾವಿಡೆಂಟ್ ಫಂಡ್ ಮತ್ತು ಇ. ಎಸ್.ಐ ನಲ್ಲಿ ದಾಖಲಾಗಿರುವ 18 ರಿಂದ 25 ವರ್ಷಗಳೊಳಗಿನವರು ದಾಖಲಿಸಿಕೊಂಡಿರುವುದನ್ನು ಆಧರಿಸಿ, ಅಧ್ಯಯನ ಮಾಡಿ ಮಾಹಿತಿ ನೀಡಲಾಗಿದೆ ಎಂದರು.
ಕೇವಲ ಇಂಜಿನಿಯರಿಂಗ್, ಐ.ಟಿ ಬಿಟಿ ಕಲಿತವರಿಗಷ್ಟೇ ಅಲ್ಲ, ಪಿಯುಸಿ ಅನುತ್ತೀರ್ಣರಾದವರಿಗೆ ಕೆಲಸ ದೊರೆಯಬೇಕು, ಆಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹಲವು ಯೋಜನೆ ರೂಪಿಸಲಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಶಿಗ್ಗಾಂವಿ, ಬಂಕಾಪುರ, ಉಡಚೆನ್ನಾಪುರ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಗ್ಗಾಂವಿ ಹಾಗೂ ಸವಣೂರು ಐ.ಟಿ. ಐಗಳು ತಲಾ ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕೆ.ಎಸ್.ಆರ್.ಟಿ. ಐ ಪಾಲಿಟೆಕ್ನಿಕ್ ನಿರ್ಮಾಣವಾಗುತ್ತಿದೆ. ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಕೌಶಲ್ಯಾಭಿವೃದ್ದಿ, ತರಬೇತಿಯನ್ನು ಎಲ್ಲಾ ಸಂಸ್ಥೆಗಳಲ್ಲಿಯೂ ದೊರೆಯುವಂತಾಗಬೇಕೆನ್ನುವ ಕನಸು ನನ್ನದು ಎಂದರು.
ಸವಣೂರಿನಲ್ಲಿ ಜವಳಿ ತರಬೇತಿ ಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಗ್ಗಾಂವಿಯ ಪಶು ವೈದ್ಯಕೀಯ ಪಾಲಿಟೆಕ್ನಿಕ್ ನ್ನು ಆರು ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು. ಎಲ್ಲಾ ಸಂಸ್ಥೆಗಳು ಸದೃಢ ವಾಗಿ ಬೆಳೆದು ಸಾವಿರಾರು ಯುವಕರಿಗೆ ತರಬೇತಿ ನೀಡಿದರೆ ಬದುಕಿನಲ್ಲಿ ಮುಂದೆ ಸಾಗುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕೋವಿಡ್ ಇದ್ದರೂ ಕೂಡ ಆರ್ಥಿಕತೆ ಕಾಪಾಡಿಕೊಂಡು ಬಂದಿದ್ದರ ಪರಿಣಾಮವಾಗಿ ವಿದೇಶಿ ಬಂಡವಾಳ ಹೆಚ್ಚು ಹರಿದು ಬಂದಿದೆ. ಕರ್ನಾಟಕ ಪ್ರಗತಿಪರ ಆಡಳಿಗಾರರ ಕೈಯಲ್ಲಿ ಇದ್ದುದರಿಂದ ಇದು ಸಾಧ್ಯವಾಗಿದೆ ಎಂದರು.
ಜವಳಿ ಪಾರ್ಕಿನಲ್ಲಿ 10 ಸಾವಿರ ಜನರಿಗೆ ಉದ್ಯೋಗ
ಸುಮಾರು 73 ಕೋಟಿ ರೂ.ಗಳ ಜಿ.ಟಿ. ಟಿ. ಸಿ ಇಲ್ಲಿ ಬರಲಿದೆ. ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸ್,ಅಲ್ಪಾವಧಿ, ಸರ್ಟಿಫೈಡ್ ಕೋರ್ಸುಗಳು ಲಭ್ಯವಿದೆ. ಜಗತ್ತಿನ ಆಧುನಿಕ ತರಬೇತಿಯನ್ನು ಇಲ್ಲಿ ಪಡೆಯಬಹುದು. ಜವಳಿ ಪಾರ್ಕ್, ಪಶು ವೈದ್ಯಕೀಯ ಪಾಲಿಟೆಕ್ನಿಕ್ ಬರುತ್ತಿದ್ದು, ಜವಳಿ ಪಾರ್ಕಿನಲ್ಲಿಯೇ 10 ಸಾವಿರ ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಇದನ್ನು ಹೊರತುಪಡಿಸಿ 5 ಸಾವಿರ ಜನರಿಗೆ ಗಾರ್ಮೆಂಟ್ ಗಳಲ್ಲಿ ಕೆಲಸ ದೊರೆಯುತ್ತದೆ. ಯುವಕರಿಗೆ ಉದ್ಯೋಗದ ಭಿವಿಷ್ಯ ಬರೆಯಲು ಕಾರ್ಯಕ್ರಮ ರೂಪಿಸಿದ್ದು ಇದರ ಪ್ರಯೋಜನವನ್ನು ಯುವಕರು ಪಡೆಯಬೇಕೆಂದರು.
ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸಚಿವ ಶಿವರಾಮ್ ಹೆಬ್ಬಾರ್,ಮೊದಲಾದವರು ಉಪಸ್ಥಿತರಿದ್ದರು.