ಸುದ್ದಿಮೂಲ ವಾರ್ತೆ
ಮೈಸೂರು ನ. 07 : ಮುಂಬರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳಾಗಿ ಹಾಲಿ ಹಾಗೂ ಮಾಜಿಗಳು ಸೇರಿ 14 ಮಂದಿಯ ಹೆಸರಿನ ಪಟ್ಟಿಯನ್ನು ಪಕ್ಷದ ನಾಯಕರಿಗೆ ಕಳುಹಿಸಿ ಅವರ ಆಯ್ಕೆ ಅಂತಿಮಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಆದ ಸಚಿವ ಸುರೇಶ್ ನೇತೃತ್ವದಲ್ಲಿ ನಡೆದ ಕ್ಷೇತ್ರದ ಆಕಾಂಕ್ಷಿಗಳ ಸಭೆಯಲ್ಲಿ 14 ಮಂದಿಯ ಹೆಸರನ್ನು ಅಂತಿಮಗೊಳಿಸಿ ತೀರ್ಮಾನಿಸಲಾಯಿತು.
ಹಾಲಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ಜೆ.ಜೆ.ಆನಂದ್, ಡಾ.ಸುಶ್ರುತ್ , ವರುಣ ಮಹೇಶ್, ಹಿರಿಯ ವಕೀಲ ಚಂದ್ರಮೌಳಿ ಸೇರಿ 14 ಮಂದಿ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದರು.
ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಮುಂದಿಡುವುದು, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಆಯ್ಕೆ ಸಮಿತಿಯ ಸಿಎಲ್ ಪಿ ಸಭೆಯಲ್ಲಿ ಅಭ್ಯರ್ಥಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಿಗೊಳಿಸುವ ತೀರ್ಮಾನಕ್ಕೆ ಬದ್ಧವಾಗಿರಲು ತೀರ್ಮಾನಿಸಲಾಯಿತು.
ಶೀಘ್ರದಲ್ಲೇ ಅಭ್ಯರ್ಥಿ ಘೋಷಿಸಬೇಕು. ಯಾರೇ ಅಭ್ಯರ್ಥಿ ಆದರೂ ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿ ಅನೇಕ ಶಾಸಕ ಇನ್ನಿತರರು ಉಪಸ್ಥಿತರಿದ್ದರು.