ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ, 30; ದುಃಖದ ನಡುವೆಯೂ ಸದ್ಭಾವನೆಯ ದ್ಯೋತಕವಾಗಿ ನಗರದ ಬಾಲ್ಡಿವಿನ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿರುವ 14 ವರ್ಷದ ಕೃತಿ ಜೈನ್ ಅವರ ಅಂಗಾಂಗಳು 9 ಮಂದಿಯ ಬದುಕಿಗೆ ಆಸರೆಯಾಗಿವೆ. ತಂದೆ ವಿರೇಂದ್ರ ಕುಮಾರ್ ಜೈನ್, ತಾಯಿ ಮೋನಿಕಾ ಅವರು ತಮ್ಮ ಪ್ರೀತಿಯ ಪುತ್ರಿಯ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದರು.
ಇತ್ತೀಚೆಗೆ ಕೃತಿ ಜೈನ್ ದುರಂತದಲ್ಲಿ ಜೀವ ಕಳೆದುಕೊಂಡಳು. ಜೈನ್ ಕುಟುಂಬದ ನಿಸ್ವಾರ್ಥತೆಯಿಂದಾಗಿ ಆಕೆಯ ಅಂಗಗಳು ಕಸಿಗಾಗಿ ಕಾಯುತ್ತಿದ್ದ ಜೀವಗಳನ್ನು ಅರಳುವಂತೆ ಮಾಡಿದೆ. ಈ ಮೂಲಕ ಕೃತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.
ಬೆಂಗಳೂರಿನ ಕಾಟನ್ ಪೇಟೆಯ ತಮ್ಮ ಮನೆಯ ಮಹಡಿ ಮೇಲೆ ತನ್ನ ಸಹೋದರ ಸಂಬಂಧಿಗಳೊಂದಿಗೆ ಮೇ 24 ರಂದು ಆಟ ಆಡುತ್ತಿದ್ದ ಕೃತಿ ಜೈನ್ 8 ರಿಂದ 10 ಅಡಿ ಮೇಲಿನಿಂದ ಆಯತಪ್ಪಿ ಬಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಪರಿಣಿತ ವೈದ್ಯರ ಸತತ ಪರಿಶ್ರಮದ ನಡುವೆಯೂ ಮೇ 28 ರಂದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಆಕೆಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಲಾಯಿತು.
ಆಳವಾದ ದುಃಖದ ನಡುವೆಯೂ ಕೃತಿ ಕುಟುಂಬದ ಸದಸ್ಯರು ಆಕೆಯ ಅಂಗಾಂಗಳನ್ನು ದಾನ ಮಾಡುವ ಧೈರ್ಯದ ನಿರ್ಧಾರ ಕೈಗೊಂಡರು. ಜೀವ ಸಾರ್ಥಕತೆ ಸಂಸ್ಥೆಯ ಬೆಂಬಲ ಮತ್ತು ಸಮನ್ವಯದಿಂದ ಅಂಗಾಂಗಗಳ ದಾನ ಪ್ರಕ್ರಿಯೆ ಆರಂಭಿಸಿತು. ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆ ಯಶಸ್ವಿಯಾಗಿ ಕೃತಿ ಅವರ ಶ್ವಾಸಕೋಶ, ಯಕೃತ್, ಮೂತ್ರಪಿಂಡಗಳು, ಹೃದಯದ ಕವಾಟ ಮತ್ತು ಅಕ್ಷಿಪಟಲಗಳನ್ನು ಪಡೆದುಕೊಂಡಿತು.
ಅಪಾಯಕಾರಿ ಪರಿಸ್ಥಿತಿಯಲ್ಲಿದ್ದವರಿಗೆ ಅಂಗಾಂಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಶ್ವಾಸಕೋಶವನ್ನು ಚೆನ್ನೈಗೆ ವಾಯುಮಾರ್ಗದ ಮೂಲಕ ರವಾನಿಸಿದ್ದು, ಉಳಿದ ಅಂಗಾಂಗಳನ್ನು ಕರ್ನಾಟಕದಲ್ಲಿಯೇ ಕಸಿ ಮಾಡಿ ಹಲವು ಜೀವಗಳನ್ನು ರಕ್ಷಿಸಲಾಗಿದೆ.
ಬಿಜಿಎಸ್ ಗ್ಲೋಬಲ್ ಗ್ಲೆನಿಗಲ್ಸ್ ಆಸ್ಪತ್ರೆಯ ಮುಖ್ಯ ದುಃಖ ಸಲಹೆಗಾರರು ಮತ್ತು ಕಸಿ ಸಂಯೋಜಕರಾದ ಸರಳಾ ಅನಂತ ರಾಜ್ ಅಂಗಾಂಗಳನ್ನು ದಾನ ಮಾಡಿದ ಕುಟುಂಬ ಸದಸ್ಯರಿಗೆ ಹೃದಯಾಂತರಾಳದಿಂದ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. “ಇಂತಹ ದುಃಖದ ಸಂದರ್ಭದಲ್ಲಿ ಕುಟುಂಬ ಸದಸ್ಯರ ಉದಾರತೆ ಅನನ್ಯ. ಕೃತಿಯ ಅಂಗಾಂಗಳ ಮೂಲಕ ಬದುಕಿನಲ್ಲಿ ಎರಡನೇ ಅವಕಾಶ ಪಡೆದಿರುವವರು ಮತ್ತು ತೊಂದರೆಯಲ್ಲಿದ್ದ ಕುಟುಂಬದವರು ಇವರ ನಿಸ್ವಾರ್ಥ ಕಾರ್ಯವನ್ನು ಸದಾ ಕಾಲ ಸ್ಮರಿಸುತ್ತಾರೆ. ಸಹಾನುಭೂತಿಯ ಶಕ್ತಿ ಮತ್ತು ಅದು ಅಚ್ಚಳಿಯದ ಪ್ರಭಾವ ಬೀರಿದೆ” ಎಂದು ಹೇಳಿದರು.
ಅಂಗಾಂಗ ದಾನ ಒಂದು ಜಾಗತಿಕವಾಗಿ ತುರ್ತು ಅನಿವಾರ್ಯವಾಗಿದ್ದು, ಅಸಂಖ್ಯಾತ ವ್ಯಕ್ತಿಗಳು ಜೀವ ರಕ್ಷಣೆ ಪ್ರಕ್ರಿಯೆಯಲ್ಲಿ ಕಾಯುತ್ತಿದ್ದಾರೆ. ಕೃತಿ ಅವರ ಕುಟುಂಬದ ಕಟುವಾದ ನಿರ್ಧಾರ ಅಂಗಾಂಗ ದಾನದ ಬಗ್ಗೆ ಮುಕ್ತ ಸಂಭಾಷಣೆಯಲ್ಲಿ ತೊಡಗಲು ದಾನಿಗಳಾಗಿ ಇತರರನ್ನು ಪ್ರೇರೇಪಿಸುತ್ತದೆ. ಅಡೆತಡೆಗಳನ್ನು ಮೀರಿ ಜಾಗೃತಿ ಮೂಡಿಸುವ ಜೊತೆಗೆ ಹೆಚ್ಚಿನ ಜೀವಗಳನ್ನು ಉಳಿಸಲು ಸಹಕಾರಿಯಾಗಿದೆ.