ಶಿಡ್ಲಘಟ್ಟ, ಮೇ 23: ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಮೇತ ಸುರಿದ ಬಾರಿ ಮಳೆಗೆ ನೂರಾರು ಎಕರೆ ಮಾವು ಬೆಳೆ ನಾಶವಾಗಿದೆ. ಇದರಿಂದ ನೂರಾರು ಟನ್ ಮಾವಿನ ಕಾಯಿ ಮಣ್ಣುಪಾಲಾಗಿದ್ದು, ಕೈಗೆ ಬಂದ ಬೆಳೆ ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ.
ರೈತ ಬೆಳೆದ ಮಾವಿನಕಾಯಿಗೆ ಬೆಲೆ ಇಲ್ಲದೆ ತಲೆ ಮೇಲೆ ಕೈ ಇಟ್ಟು ಕುಳಿತಿದ್ದ. ಈ ಮಧ್ಯೆ ರಾತ್ರಿ ಸುರಿದ ಅಳಿಕಲ್ಲು ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಮಾವಿನ ಕಾಯಿ ನಾಶವಾಗಿವೆ. ಈಗ ರೈತನಿಗೆ ಸುಟ್ಟ ಗಾಯದ ಮೇಲೆ ಕಾದ ಸುಣ್ಣ ಸುರಿದಂತಾಗಿದ್ದು, ಸರ್ಕಾರದಿಂದ ಪರಿಹಾರದ ನಿರೀಕ್ಷೆ ನೋಡುತ್ತಿದ್ದಾನೆ.
ಒಂದು ವರ್ಷದಿಂದ ಗೊಬ್ಬರ ಹಾಕಿ, ಔಷದಿ ಸಿಂಪಡಿಸಿ ರೋಗ ಬಾರದಂತೆ ಕಾಪಾಡಿಕೊಂಡು ಬಂದಿದ್ದ ನಾಶವಾಗಿದೆ. ಮರದಲ್ಲಿರಬೇಕಾಗಿದ್ದ ಮಾವಿನ ಕಾಯಿ ಮಣ್ಣುಪಾಲಾಗಿದ್ದು, ಮಣ್ಣಾಗಿದ್ದ ಮಾವಿನ ಕಾಯಿಯನ್ನು ಆಯ್ದು ರಾಶಿ ಹಾಕುತ್ತಿರುವ ದೃಶ್ಯ ಮನಕಲುವಂತಿದೆ.
ಇದರ ಜೊತೆಗೆ ಹತ್ತರು ಎಕರೆ ದ್ರಾಕ್ಷಿ ಬೆಳೆ ಸಂಪೂರ್ಣ ನಾಶ ಆಗಿದ್ದು ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ಮಳೆ ನೀರಿಗೆ ಕೊಚ್ಚಿಹೋಗಿದೆ.
ಶಿಡ್ಲಘಟ್ಟ ನೂತನ ಶಾಸಕ ಬಿ.ಎನ್. ರವಿಕುಮಾರ್ ಅವರು ಅಧಿಕಾರಿಗಳ ತಂಡದೊಂದಿಗೆ ಬೆಳೆನಾಶವಾದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ವೈ.ಹುಣಸೇಹಳ್ಳಿ ಪಂಚಾಯ್ತಿ,ತು ಮ್ಮನಹಳ್ಳಿ ಪಂಚಾಯ್ತಿ, ಆನೂರು ಪಂಚಾಯ್ತಿ ಹಾಗು ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಚೀಮಂಗಲ ಗ್ರಾಮ ಪಂಚಾಯ್ತಿಯ ಗ್ರಾಮಗಳಲ್ಲಿ ಮಾವು, ದ್ರಾಕ್ಷಿ ,ಹೂ ,ಹಲಸು ,ದಾಳಿಂಬೆ ಬೆಳೆಗಳು ನಾಶವಾಗಿವೆ. ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ ಬೆಳೆ ನಷ್ಟ ಹೊಂದಿರುವ ರೈತರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಬೆಳೆ ವಿಮೆ ಮಾಡಿಸಿರುವ ರೈತರಿಗೆ ಶೀಘ್ರವಾಗಿ ವಿಮೆ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಬೆಳೆ ನಷ್ಟ ಹೊಂದಿ ಸಂಕಷ್ಟಕ್ಕೆ ಇಡಾಗಿದ್ದ ರೈತರಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಎನ್ ಸ್ವಾಮಿ, ತಾದೂರು ರಘು, ಹುಜಗೂರು ರಾಮಣ್ಣ, ಕೊತ್ತನೂರು ಲಕ್ಷ್ಮಿಪತಿ, ಚಂದ್ರಶೇಖರ್, ಮೇಲೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಆರ್. ಎ ಉಮೇಶ್, ಇನ್ನು ಮುಂತಾದವರು ಹಾಜರಿದ್ದರು.