ಸುದ್ದಿಮೂಲ ವಾರ್ತೆ
ಬೆಂಗಳೂರು, ಆ. 14 : ದೇಶದ 76 ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ವಿಜಯನಗರದ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ 1500 ಅಡಿ ಉದ್ದದ ರಂಗೋಲಿ ಮೂಲಕ ರಾಷ್ಟ್ರಧ್ವಜ ರಚಿಸಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ತ್ರಿವರ್ಣ ಧ್ವಜ ತಯಾರಿಸಲು 60 ಕೆ.ಜಿ ಕೇಸರಿ, ಹಸಿರು, ಬಿಳಿ ಬಣ್ಣದ ರಂಗೋಲಿ ಪುಡಿ, 30 ಕೆ.ಜಿ ಹೂವುಗಳ ಮೂಲಕ 80 ವಿದ್ಯಾರ್ಥಿಗಳು, 30 ಮಂದಿ ಕಾಲೇಜು ಸಿಬ್ಬಂದಿ ಪರಿಶ್ರಮ ಪಟ್ಟು ತ್ರಿವರ್ಣ ಧ್ವಜ ಸಿದ್ಧಪಡಿಸಿದರು. ಬೆಳಿಗ್ಗೆ 7 ಗಂಟೆಗೆ ಅರಂಭವಾದ ರಂಗೋಲಿ ರಚಿಸುವ ಚಟುವಟಿಕೆಗೆ ಎನ್.ಎಸ್.ಎಸ್ ವಿದ್ಯಾರ್ಥಿಗಳು ಸಹ ನೆರವಾದರು. ವಿದ್ಯಾರ್ಥಿಗಳ ದೇಶ ಪ್ರೇಮದಲ್ಲಿ ಸಿಬ್ಬಂದಿ ಸಹ ಭಾಗಿಯಾಗಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ವಾಸವಿ ಜ್ಞಾನಪೀಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಅರ್. ವಿಜಯಸಾರಥಿ ಮಾತನಾಡಿ, ನಮ್ಮೆಲ್ಲರಿಗೂ ಸಂಭ್ರಮ, ಸಡಗರದ ದಿನ. ನಾವು ಕೇವಲ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿಲ್ಲ, ಬದಲಿಗೆ ಸಂಭ್ರಮಿಸುತ್ತಿದ್ದೇವೆ. ಸ್ವಾತಂತ್ರ್ಯದ ಮಹತ್ವ, ತ್ರಿವರ್ಣ ಧ್ವಜದ ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಉದ್ದೇಶದಿಂದ ರಂಗೋಲಿ ಮೂಲಕ ಬೃಹತ್ ಧ್ವಜ ರಚಿಸಲಾಗಿದೆ. ಸರ್ಕಾರ ಹರ್ ಘರ್ ತಿರಂಗಾ ಹಾರಿಸುವಂತೆ ಕರೆ ನೀಡಿದೆ. ಇದಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಧ್ವಜ ಅನಾವರಣಗೊಳಿಸಲಾಗಿದೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಪದ್ಮ, ಡಾ.ಬಿ.ವಿ. ರಂಗಸ್ವಾಮಿ, ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ಎಸ್. ರಚನಾ, ಡಿಪ್ಲಮೋ ಕಾಲೇಜಿನ ಪ್ರಾಂಶುಪಾಲರಾದ ಸೌಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.