ಸುದ್ದಿಮೂಲ ವಾರ್ತೆ
ಬೆಂಗಳೂರು ಅ.4: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮೀಕ್ಷೆ ನಡೆಸಿರುವ ಸಂಬಂಧ ಆರೋಗ್ಯ ಹಾಗೂ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ಅವರು ವರದಿಯನ್ನು ಬಿಡುಗಡೆಗೊಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 08 ವಲಯಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕರ್ಯಕ್ರಮದ ಯಶಸ್ವಿ ಅನುಷ್ಟಾನದ ಬಗ್ಗೆ ವಸ್ತುನಿಷ್ಠ ಮಾಹಿತಿಯನ್ನು ಪಡೆಯಲು ಹಾಗೂ ಬೀದಿನಾಯಿಗಳ ಹಾವಳಿ ಹಾಗೂ ಅವುಗಳ ನಿಯಂತ್ರಣಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಲು ಎನ್ಎಪಿಆರ್ಇ ಶಿಫಾರಸ್ಸು ಮಾಡಿರುವ ಸೈಟ್-ರೀಸೈಟ್ ವಿಧಾನವನ್ನು ಅಳವಡಿಸಿಕೊಂಡು ಬೀದಿನಾಯಿಗಳ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು.
ಬಿಬಿಎಂಪಿಯ ನಾಲ್ಕು ವಿಭಾಗಗಳಾದ ವಸತಿ ಪ್ರದೇಶ, ಕೊಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳನ್ನು 0.5 ಚ.ಕಿ.ಮೀ ವ್ಯಾಪ್ತಿಯ 6850 ಮೈಕ್ರೋಜೋನ್ಗಳನ್ನಾಗಿ ವಿಂಗಡಣೆ ಮಾಡಿದ್ದು, ಅದರಲ್ಲಿ ಶೇ.20ರಷ್ಟು ರ್ಯಾಂಡಂ ಸ್ಯಾಂಪಲ್ಗಳನ್ನು ಅಂದರೆ 1360 ಮೈಕ್ರೋಜೋನ್ಗಳನ್ನು ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗಿರುತ್ತದೆ. ಬೀದಿ ನಾಯಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ನಿರ್ವಹಿಸಲಾಗಿರುತ್ತದೆ.
ಈ ಬಾರಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಪಾಲಿಕೆಯ 08 ವಲಯಗಳಲ್ಲಿ ಒಟ್ಟು 2,79,335 ಬೀದಿನಾಯಿಗಳು ಕಂಡುಬಂದಿರುತ್ತದೆ. 2019 ನೇ ಸಾಲಿನ ಬೀದಿನಾಯಿಗಳ ಸಮೀಕ್ಷೆಯಲ್ಲಿ 3.10 ಲಕ್ಷ ಬೀದಿನಾಯಿಗಳು ಇರುವುದಾಗಿ ಮತ್ತು ಶೇಕಡ 51.16ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿರುವುದಾಗಿ ಅಂದಾಜಿಸಲಾಗಿತ್ತು. ಹಾಲಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಒಟ್ಟು ಶೇಕಡ 71.85 ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿದ್ದು, ಒಟ್ಟಾರೆಯಾಗಿ ಶೇಕಡ 20 ರಷ್ಟು ಸಂತಾನಹರಣ ಶಸ್ತ್ರ ಚಿಕಿತ್ಸೆ ಪ್ರಮಾಣ ಹೆಚ್ಚಳವಾಗಿರುತ್ತದೆ ಹಾಗೂ ಬೀದಿನಾಯಿ ಮರಿಗಳ ಸಂಖ್ಯೆಯು ಕಡಿಮೆಯಾಗಿರುತ್ತದೆ. ಪ್ರಸ್ತುತ ಸಾಲಿನ ಸಮೀಕ್ಷೆಯ ವರದಿಯಂತೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡ 10 ರಷ್ಟು ಬೀದಿನಾಯಿಗಳ ಸಂಖ್ಯೆ ಕಡಿಮೆಯಾಗಿರುತ್ತದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಿರುವುದರಿಂದ ಬೀದಿನಾಯಿಗಳ ಸಂಖ್ಯೆಯು ಇಳಿಕೆಯಾಗಿರುತ್ತದೆ. ಸದರಿ ಬೀದಿನಾಯಿಗಳ ಸಮೀಕ್ಷೆ ಮುಂದಿನ ದಿನಗಳಲ್ಲಿ ಪಾಲಿಕೆ 08 ವಲಯಗಳಲ್ಲಿ/ವಾರ್ಡ್ ಗಳಲ್ಲಿ ಬೀದಿನಾಯಿ ನಿಯಂತ್ರಣ ಮತ್ತು ಅವುಗಳಿಗೆ ಸಂಬಂದಿತ ಸಮಸ್ಯೆಗಳನ್ನು ಸಂದರ್ಭಕ್ಕನುಗುಣವಾಗಿ ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಯೋಜನೆಗಳನ್ನು ನೀತಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ.
ಈ ವೇಳೆ ಐಸಿಎಆರ್-ನಿವೇದಿ ಸಂಸ್ತೆ ನಿರ್ದೇಶಕರಾದ ಡಾ. ಬಲದೇವ್ ರಾಜ್ ಗುಲಾಟಿ ಹಾಗೂ ಪ್ರಧಾನ ಸೈಂಟಿಸ್ಟ್ ಡಾ. ಕೆ.ಪಿ.ಸುರೇಶ್, ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.