ಸುದ್ದಿಮೂಲ ವಾರ್ತೆ ಬೆಂಗಳೂರು, ಫೆ. 12:
2022- 23ನೆಯ ಸಾಲಿನಲ್ಲಿ ರಾಜ್ಯದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24,000 ಕೋಟಿ ರೂಪಾಯಿ ಕೃಷಿ ಸಾಲ ವಿತರಿಸುವ ಗುರಿ ಇದ್ದು, ಜನವರಿ ಅಂತ್ಯದ ವೇಳೆಗೆ 22 ಲಕ್ಷ ರೈತರಿಗೆ 16,500 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾ ರರೊಂದಿಗೆ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಗುರಿ ಸಾಧಿಸಲು ಎಲ್ಲ ಡಿಸಿಸಿ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ನೋಡೆಲ್ ಅಧಿಕಾರಿ ನೇಮಿಸಲಾಗಿದೆ ಎಂದರು.
ಸಾಲ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಸರಕಾರ ನಿಗದಿಪಡಿಸಿರುವ ಸಾಲದ ಗುರಿ ತಲುಪಬೇಕು. ಅರ್ಹ ಎಲ್ಲಾ ರೈತರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.
ರಾಜ್ಯದ 6 ಸಾವಿರಕ್ಕೂ ಅಧಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಗಳಿಗೆ 191 ಕೋಟಿ ರೂ.ವೆಚ್ಚದಲ್ಲಿ ಏಕರೂಪದ ತಂತ್ರಾಂಶ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರಕಾರ ಶೇ.60, ರಾಜ್ಯ ಸರಕಾರ ಶೇ.20 ಹಾಗೂ ಡಿಸಿಸಿ ಬ್ಯಾಂಕ್ ಶೇ.20 ಮೊತ್ತ ಭರಿಸಲಿದೆ. ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ಯಶಸ್ವಿನಿ’ ಆರೋಗ್ಯ ಯೋಜನೆ ಜಾರಿಯಾಗಿದ್ದು, ಫೆವರಿ ಅಂತ್ಯದವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.