25ಜಿಎಲ್ಬಿ07
ಮಲ್ಲಾಬಾದ್ ಏತ ನೀರಾವರಿ ಯೋಜನೆ: ಸದನದಲ್ಲಿ ಕೇದಾರಲಿಂಗಯ್ಯ ಹಿರೇಮಠ್ ಹೋರಾಟ ಪ್ರಸ್ತಾಪಿಸಿದ ಬೊಮ್ಮಾಯಿ
ಜೇವರ್ಗಿ:ತಾಲ್ಲೂಕು ಸೇರಿದಂತೆ ಮೂರು ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತಾದ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಜಾರಿಗಾಗಿ ಹಿರಿಯ ರೈತ ಮುಖಂಡ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ್ ಅವರು ಕೈಗೊಂಡ ಸುದೀರ್ಘ ಹಾಗೂ ನಿರಂತರ ಹೋರಾಟದ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯ ವಿಧಾನ ಮಂಡಲದ ಕೊನೆಯ ಅಧಿವೇಶನದ ಕಲಾಪದಲ್ಲಿ ಪ್ರಸ್ತಾಪಿಸಿ, ಹಿರೇಮಠ್ ಅವರ ಹೋರಾಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಮಂಡಲದ ಬಜೆಟ್ ಅಧಿವೇಶನದ ಕೊನೆಯ ಕಲಾಪದಲ್ಲಿ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ಡಾ. ಅಜಯಸಿಂಗ್ ಅವರು ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಹಣ ಕೊಡಿ, ನಾಳಿನ ಸಭೆಯಲ್ಲಿ ಪಾಸ್ ಮಾಡಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯ ಮೂರನೇ ಹಂತದಲ್ಲಿದೆ. ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಜಾರಿಗಾಗಿ ಅಲ್ಲಿನ ಕೇದಾರಲಿಂಗಯ್ಯ ಹಿರೇಮಠ್ ಅವರು ಕಳೆದ 14, 15 ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು. ಮನಸ್ಸು ಮಾಡಿದ್ದರೆ ಘಟಾನುಘಟಿ ರಾಜಕಾರಣಿಗಳು ಅಧಿಕಾರದಲ್ಲಿದ್ದು, ಅದನ್ನು ಜಾರಿ ಮಾಡಬೇಕಾಗಿತ್ತು. ಅದನ್ನು ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದರು.
ನಾನು ಆ ಸಂದರ್ಭದಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವನಾಗಿದ್ದೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನೂ ಆಗಿದ್ದೆ. ಜೇವರ್ಗಿಯಲ್ಲಿ ಕೇದಾರಲಿಂಗಯ್ಯ ಹಿರೇಮಠ್ ಅವರು ಹೋರಾಟವನ್ನು ಆರಂಭಿಸಿದ್ದರು. ಮಲ್ಲಾಬಾದ್ನಿಂದ ಪಟ್ಟಣದವರೆಗೆ ಪಾದಯಾತ್ರೆ ಹಾಗೂ ಉರುಳು ಸೇವೆ ಮತ್ತು ಆಮರಣ ಉಪವಾಸ ಸತ್ಯಾಗ್ರಹದಂತಹ ಹೋರಾಟವನ್ನು ಮಾಡಿದ್ದರು. ನಾನು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಭರವಸೆ ಕೊಟ್ಟು ಮಲ್ಲಾಬಾದ್ ಏತ ನೀರಾವರಿ ಯೋಜನೆ ಕಾರ್ಯ ಆರಂಭಿಸಿದೆ. ಒಟ್ಟು ಎರಡು ಹಂತದ ಕಾಮಗಾರಿಗಳು ಇದ್ದು, ಈಗಾಗಲೇ ಒಂದು ಹಂತ ಮುಗಿದಿದೆ. ಇನ್ನೊಂದು ಹಂತ ಬಾಕಿ ಇದೆ ಎಂದು ಅವರು ಹೇಳಿದರು. ಇಂತಹ 9 ಏತ ನೀರಾವರಿ ಯೋಜನೆಗಳನ್ನು ರಾಜ್ಯ ಸರ್ಕಾರವು ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಹೋರಾಟದಲ್ಲಿ ಮೈಲಿಗಲ್ಲು: ಮಲ್ಲಾಬಾದ್ ಏತ ನೀರಾವರಿ ಯೋಜನೆ ಹಾಗೂ ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕಾಗಿ ಆಗ್ರಹಿಸಿ ಇಡೀ ರಾಜ್ಯದಲ್ಲಿಯೇ ಪ್ರಖರ ಹೋರಾಟವನ್ನು ಕೇದಾರಲಿಂಗಯ್ಯ ಹಿರೇಮಠ್ ಅವರು 2004ರಲ್ಲಿ ಪ್ರಾರಂಭಿಸಿದರು. ಪಾದಯಾತ್ರೆ, ಉರುಳು ಸೇವೆ ಹಾಗೂ ಆಮರಣ ಉಪವಾಸ ಸತ್ಯಾಗ್ರಹದಂತಹ ಅಹಿಂಸಾತ್ಮಕ ಹೋರಾಟದಿಂದಾಗಿ ಮಠಾಧೀಶರೂ ಸೇರಿದಂತೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದರು.
ಆ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಅವರು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆಯಂತೆ ಹೋರಾಟದ ಸ್ಥಳಕ್ಕೆ ಭೇಟಿ ಕೊಟ್ಟು ಬೇಡಿಕೆಗಳನ್ನು ಪರಿಹರಿಸುವ ಮೂಲಕ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದರು.
ಮಲ್ಲಾಬಾದ್ ಏತ ನೀರಾವರಿ ಯೋಜನೆ ಜಾರಿಯಾದರೂ ಸಹ ಇನ್ನೂ ಬಾಕಿ ಕಾಮಗಾರಿ ಇದ್ದುದರಿಂದ ಮತ್ತೆ ಈಗ ಹೋರಾಟ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ಡಾ. ಅಜಯಸಿಂಗ್ ಅವರು ಸದನದಲ್ಲಿ ಪ್ರಸ್ತಾಪಿಸಿದಾಗ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಕ್ತ ಕಂಠದಿoದ ಕೇದಾರಲಿಂಗಯ್ಯ ಹಿರೇಮಠ್ ಅವರ ಹೋರಾಟವನ್ನು ಶ್ಲಾಘಿಸಿದರು.
ಆದಾಗ್ಯೂ, ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಕಡೆಗಣಿಸಿತು ಎಂಬ ಟೀಕೆಯನ್ನು ಪರೋಕ್ಷವಾಗಿ ಮಾಡಿದರು.
ಕೇದಾರಲಿಂಗಯ್ಯ ಹಿರೇಮಠ್ ಅವರು ಹೋರಾಟದ ಸಂದರ್ಭದಲ್ಲಿಯೂ ಜಾತ್ಯಾತೀತ ಜನತಾದಳದಲ್ಲಿ ಇದ್ದರು. ಈಗಲೂ ಸಹ ಜೆಡಿಎಸ್ನಲ್ಲಿಯೇ ಇದ್ದಾರೆ. ಆದಾಗ್ಯೂ, ಅವರ ಹೋರಾಟಕ್ಕೆ ಪಕ್ಷ ಬೇಧ ಮರೆತು ರಾಜಕೀಯ ಮುಖಂಡರು ಬೆಂಬಲ ನೀಡಿದರು.
ಮಾಜಿ ಸಚಿವ ದಿ. ವೈಜನಾಥ್ ಪಾಟೀಲ್, ಮಾಜಿ ಶಾಸಕ ಬಿ.ಆರ್. ಪಾಟೀಲ್, ಬಸವರಾಜ್ ಇಂಗಿನ್ ಸೇರಿದಂತೆ ಅನೇಕರು ಕೇದಾರಲಿಂಗಯ್ಯ ಹಿರೇಮಠ್ ಅವರ ಹೋರಾಟಕ್ಕೆ ನಿರಂತರ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಮಲ್ಲಾಬಾದ್ ಏತ ನೀರಾವರಿ ಯೋಜನೆ ಜಾರಿಯಲ್ಲಿ ಕೇದಾರಲಿಂಗಯ್ಯ ಹಿರೇಮಠ್ ಅವರ ಪಾತ್ರವೇ ಬಹುಮುಖ್ಯವಾಗಿತ್ತು. ಹೀಗಾಗಿ ಏತ ನೀರಾವರಿ ಯೋಜನೆ ಜಾರಿಯಲ್ಲಿದೆ. ಈಗ ಬಾಕಿ ಯೋಜನೆಯನ್ನೂ ಸಹ ಪೂರ್ಣಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮಲ್ಲಾಬಾದ್ ಏತ ನೀರಾವರಿ ಯೋಜನೆಯು ಕಳೆದ 2006ರಲ್ಲಿ ಮಂಜೂರಾಗಿತ್ತು. 2012ರಲ್ಲಿ ಕಾಮಗಾರಿ ಆರಂಭಗೊoಡಿತ್ತು. 2015ರಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಬಾಕಿ ಕಾಮಗಾರಿ ಉಳಿದಿತ್ತು. ಯೋಜನೆಯಿಂದ ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕಿನ ಒಂದು ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ದೊರಕಲಿದೆ. ಬಾಕಿ ಕಾಮಗಾರಿಗೆ ಆಗ್ರಹಿಸಿ ತಾಲ್ಳೂಕು ರೈತ ಹೋರಾಟ ಸಮಿತಿಯು ಹೋರಾಟಗಳನ್ನು ಆರಂಭಿಸಿದೆ. ಯಾಳವಾರ್ ಕ್ರಾಸ್ನಿಂದ ಪಟ್ಟಣದವರೆಗೆ ಕಳೆದ ಡಿಸೆಂಬರ್ 13ರಂದು ಪಾದಯಾತ್ರೆಯನ್ನು ಮಾಡಿತ್ತು. ಹೋರಾಟ ಮುಂದುವರೆದಿದ್ದು, ಮತ್ತೆ ಕೇದಾರಲಿಂಗಯ್ಯ ಹಿರೇಮಠ್ ಅವರ ಹೋರಾಟದ ನೆನಪು ಮಾಡಿಕೊಂಡ ಮುಖ್ಯಮಂತ್ರಿಗಳು, ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸುವ ಆಶ್ವಾಸನೆ ನೀಡಿದ್ದಾರೆ.