ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.26: ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾದ ದಿನದಿಂದ ಇದುವರೆಗೆ ಚುನಾವಣಾ ಅಕ್ರಮದಡಿ 265 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇದುವರೆಗೆ 265 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಅಲ್ಲದೆ, ಗುಂಪು ಘರ್ಷಣೆ ಸಂಬಂಧ 15 ಎಫ್ಐಆರ್ ಹಾಗೂ ದ್ವೇಷ ಭಾಷಣ ಸಂಬಂಧ 5 ಎಫ್ಐಆರ್ ಸೇರಿದಂತೆ ಒಟ್ಟು 673 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.
2,613 ಅಭ್ಯರ್ಥಿಗಳು ಕಣದಲ್ಲಿ
ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಗಿದ ಬಳಿಕ ಅಂತಿಮವಾಗಿ ,613 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಅದರಲ್ಲಿ 2,427 ಪುರುಷರು, 185 ಮಹಿಳೆಯರು ಎಂದು ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದರು.
ರಾಜ್ಯದಲ್ಲಿ ಅತಿ ಹೆಚ್ಚು ಎಂದರೆ 24 ಅಭ್ಯರ್ಥಿಗಳು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಅತಿ ಕಡಿಮೆ ಎಂದರೆ 5 ಜನ ಅಭ್ಯರ್ಥಿಗಳು ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ,ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ ಎಂದರು.
ರಾಜ್ಯದ ಸಾಮಾನ್ಯ ಮತದಾರರು 5,30,85,566. ಸೇವಾ ಮತದಾರರು 47,488 ಒಟ್ಟು ಮತದಾರರು 5,31,33,054 ಇದ್ದಾರೆ. ಇದರಲ್ಲಿ ಪುರುಷ ಸಾಮಾನ್ಯ ಮತದಾರರು 2,66,82,156 ಮತ್ತು ಮಹಿಳಾ ಸಾಮಾನ್ಯ ಮತದಾರರು 2,63,98,483 ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 11,71,558 ಯುವ ಮತದಾರರು ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ ಎಂದರು.
ವೃದ್ಧರು, ಅಂಗವಿಕಲರಿಗೆ ಮನೆಯಿಂದ ಮತದಾನ:
80 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲಿರಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಏ.29 ರಿಂದ ಮೇ 6ರವರೆಗೆ ಚುನಾವಣಾ ಸಿಬ್ಬಂದಿ ಪ್ರತಿ ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡಿ ಗೌಪ್ಯ ಮತದಾನ ಮಾಡಿಸಲಿದ್ದಾರೆ. ಎರಡು ಬಾರಿಯೂ ಲಭ್ಯ ಇಲ್ಲದಿದ್ದರೆ ಅಂತವರಿಗೆ ಮತ್ತೆ ಮತದಾನ ಮಾಡಲು ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.
80 ವರ್ಷ ಮೇಲ್ಪಟ್ಟ 80,250 ಮತದಾರರು ಮತ್ತು ಅಂಗವಿಕಲ 19,279 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿಯೇ ಮನೆಗೆ ತೆರಳಿ ಮತದಾನ ಮಾಡಿಸಲಾಗುತ್ತದೆ ಎಂದು ವಿವರಿಸಿದರು.
ಮತದಾನ ಸಿಬ್ಬಂದಿ, ಪೊಲೀಸರು, ಪೋಲಿಂಗ್ ಏಜೆಂಟ್ ಮನೆಯಿಂದಲೇ ಮತದಾನ ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಿದವರ ಮನೆಗೆ ತೆರಳಲಿದ್ದಾರೆ. ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದೆ. ಮನೆಯಿಂದಲೇ ಮತದಾನದ ವಿಡಿಯೋಗ್ರಾಫ್ ಮಾಡಲಾಗುವುದು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಸೋಮಣ್ಣ ಆಡಿಯೋ: ತನಿಖೆಗೆ ಸೂಚನೆ
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ ದೂರವಾಣಿ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಆಮಿಷ ಒಡ್ಡಿದ ಆಡಿಯೋ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.
ವಿ. ಸೋಮಣ್ಣ ಅವರು ಜೆಡಿಎಸ್ ಅಭ್ಯರ್ಥಿಗೆ ಆಮಿಷ ಒಡ್ಡಿದ್ದಾರೆ ಎಂಬ ಆರೋಪ ನಮ್ಮ ಗಮನಕ್ಕೆ ಬಂದಿದೆ. ದೂರವಾಣಿ ಕರೆಯ ಆಡಿಯೋ ತುಣುಕಿನ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಚುನಾವಣಾಧಿಕಾರಿಗೆ ಸೂಚಿಸಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.