ಸುದ್ದಿಮೂಲವಾರ್ತೆ
ಕೊಪ್ಪಳ,ಅ.11: ಚುನಾವಣೆ ಮುಂಚೆ ಹೇಳಿದಂತೆ ಈಗಿನ ಸರಕಾರ ಮುಸ್ಲಿಮರ 2B ಮೀಸಲಾತಿ ಮರುಸ್ಥಾಪನೆ ಮಾಡಬೇಕು ಮತ್ತು ಅದನ್ನು 8 % ಗೆ ಹೆಚ್ಚಿಸಬೇಕು. ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಶಾಸಕರು ಇದನ್ನು ಬೆಂಬಲಿಸಬೇಕು ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಅವರು ಬುಧವಾರ ಕೊಪ್ಪಳ ಜಿಲ್ಲಾ SDPI ಪಕ್ಷ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮುಸ್ಲಿಮರ ಮೀಸಲಾತಿ ಹೆಚ್ಚಳ ಮತ್ತು ಕಾಂತರಾಜ ವರದಿ ಬಹಿರಂಗಕ್ಕೆ ಒತ್ತಾಯದ ಧರಣಿಯಲ್ಲಿ ಮಾತನಾಡಿದರು.
ಮುಸ್ಲಿಮರಲ್ಲಿ ಸಣ್ಣ ಪುಟ್ಟ ಸ್ವ ಉದ್ಯೋಗ ಮಾಡುವವರ ಪ್ರಮಾಣ ಬಹಳ ಇದೆ. ಅವರಿಗೆ ಸ್ವ ಉದ್ಯೋಗದ ಸಲಕರಣೆ, ಸಾಲ ಸೌಲಭ್ಯ ನೀಡುವಂತೆ ಆಗಬೇಕು ಎಂದರು.
ಧರಣಿಯಲ್ಲಿ ಪಕ್ಷದ ವಿವಿಧ ಮುಖಂಡರು ಮಾತನಾಡಿ ಹಿಂದಿನ ಬಿಜೆಪಿ ಸರಕಾರ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿದಾಗ ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯರು ಈಗ ಮುಖ್ಯಮಂತ್ರಿ. ಅವರು ಬಿಜೆಪಿ ಸರಕಾರದ ಶಿಫಾರಸ್ಸು ರದ್ದು ಮಾಡಿ ಕೋರ್ಟ್ ದಾವೆ ಹಿಂಪಡೆಯಬೇಕು.
ಹಿಂದಿನ ಸರಕಾರಗಳು ನೇಮಿಸಿದ್ದ ವಿವಿಧ ಆಯೋಗಗಳು ಮುಸ್ಲಿಮರು ಶೈಕ್ಷಣಿಕ, ಆರ್ಥಿಕ , ಸಾಮಾಜಿಕವಾಗಿ ತೀರ ಹಿಂದುಳಿದಿದ್ದಾರೆ ಎಂದು ವರದಿ ನೀಡಿವೆ.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇದೆ ಅದನ್ನು ಸರಿಪಡಿಸಬೇಕು ಮತ್ತು ಕಾಂತರಾಜ ಆಯೋಗದ ವರದಿ ಸ್ವೀಕರಿಸಿ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ SDPI ಜಿಲ್ಲಾಧ್ಯಕ್ಷರಾದ ಹುಜೂರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷರಾದ ಚನ್ನಪ್ಪ ಕಂಪ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುಸೂಫ್ ಮೋದಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದೀನ್ ಮಾಳೆಕೊಪ್ಪ , ಪ್ರಗತಿಪರ ಹೋರಾಟಗಾರರಾದ ಮಹಾಂತೇಶ ಕೊತಬಾಳ, ಡಿ.ಹೆಚ್.ಪೂಜಾರ, ದೇವದಾಸಿ ವಿನೋಚನಾ ವೇದಿಕೆಯ ಶಶಿಕಲಾ, ಮುಖಂಡರಾದ ಸಲೀಂ ಖಾದ್ರಿ, ಬಾಷಾ ಚಲವಾದಿ, ಪಕ್ಷದ ಕೊಪ್ಪಳ ಕ್ಷೇತ್ರದ ಅಧ್ಯಕ್ಷ ಸಾದಿಕ್ ಅಲಿ ಗಂಗಾವತಿ ಕ್ಷೇತ್ರದ ಅಧ್ಯಕ್ಷ ಸಲೀಂ ಮನಿಯಾರ್, ಕನಕಗಿರಿ ಕ್ಷೇತ್ರದ ಅಧ್ಯಕ್ಷ ಅಜ್ಮೀರ್ ಸಿಂಗನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.