ಕಲಬುರಗಿ, ಜು.20: ಸಂವಿಧಾನದ ಅನುಚ್ಛೇದ 371( ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವ ಪ್ರಯುಕ್ತ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ, ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ.
ಈ ಹಿನ್ನಲೆಯಲ್ಲಿ ಸರ್ಕಾರದ ಜಂಟಿ ಕಾರ್ಯದರ್ಶಿ ( ಸಚಿವ ಸಂಪುಟ) ಆರ್. ಚಂದ್ರಶೇಖರ್ ಅವರು ಆದೇಶ ಹೊರಡಿಸಿದ್ದು, ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್, ಡಾ ಶರಣಪ್ರಕಾಶ ಪಾಟೀಲ್, ಡಿ. ಸುಧಾಕರ್, ಬಿ.ನಾಗೇಂದ್ರ ಹಾಗೂ ಎನ್ ಎಸ್ ಬೋಸರಾಜ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವ ಪ್ರಯುಕ್ತ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಸಚಿವ ಸಂಪುಟದ ಉಪ ಸಮಿತಿ ಪರಿಶೀಲಿಸಲಿದೆ. ಸದರಿ ಸಮಿತಿಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಸಮಿತಿಗೆ ಅಗತ್ಯ ನೆರವು ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.