ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಅ.06: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ಅವರ ನೇತೃತ್ವದ ತಂಡ ಶುಕ್ರವಾರ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಕ್ಷೇತ್ರ ವೀಕ್ಷಣೆ ಮಾಡಿ ಪರಿಶೀಲಿಸಿತು.
ತಂಡದ ಸದಸ್ಯರಾದ ಮಹಲ್ ನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರದ ಉಪನಿರ್ದೇಶಕ ಕಿರಣ್ ಚೌದರಿ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್ ರವರು ಪರಿಶೀಲನೆಗೆ ಸಾಥ್ ನೀಡಿದರು.
ಮೊದಲಿಗೆ ತಂಡವು ಜಿಲ್ಲಾಡಳಿತ ಭವನದ ಜಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬರ ಪರಿಸ್ಥಿತಿ ಬಿಂಬಿಸುವ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಣೆ ಮಾಡಿತು. ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳಿಂದ ಅಂಕಿ ಅಂಶಗಳ ಸಮೇತ ಮಾಹಿತಿಯನ್ನು ಕಲೆಹಾಕಿತು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ಅವರು ಮಾತನಾಡಿ, ಜಿಲ್ಲೆಯ 6 ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. 2.26 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ 1.39 ಹೆಕ್ಟೇರ್ ಅಂದರೆ ಶೇ. 62 ರಷ್ಟು ಪ್ರದೇಶ ಮಳೆ ಆಶ್ರಿತ ಪ್ರದೇಶವಾಗಿದ್ದು, ಈ ಪ್ರದೇಶದ ರೈತರು ಹೆಚ್ಚಿನ ಬೆಳೆ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು.
ಮಳೆ ಕೊರತೆಯಿಂದ ಜಿಲ್ಲೆಯ ನಗರಗಳಲ್ಲಿನ 19 ವಾರ್ಡ್ ಗಳಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿನ 20 ಗ್ರಾಮಗಳಿಗೆ ಕುಡಿಯುವ ನೀರನ್ನು ಖಾಸಗಿ ಕೊಳವೆ ಬಾವಿಗಳಿಂದ ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ಸದ್ಯಕ್ಕೆ 3,08,655 ಮೆಟ್ರಿಕ್ ಟನ್ ಮೇವು ಲಭ್ಯವಿದೆ ಮಳೆ ಪ್ರಮಾಣ ಮುಂದಿನ ದಿನಗಳಲ್ಲಿಯೂ ಕೊರತೆಯುಂಟಾದರೆ ಬರುವ ಫೆಬ್ರವರಿ ಮಾಹೆಯ ನಂತರ ಮೇವಿನ ಕೊರತೆ ಎದುರಾಗಲಿದೆ ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಮೀನುಗಳಿಗೆ ಭೇಟಿ
ಸಭೆಯಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯ ಸಮಗ್ರ ಚಿತ್ರಣವನ್ನು ಆಲಿಸಿದ ಬರ ಅಧ್ಯಯನ ತಂಡವು ಸಭೆಯ ನಂತರ ನೇರವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಚೊಕ್ಕಹಳ್ಳಿ ಗ್ರಾಮದ ರೈತರಾದ ಮಂಜುನಾಥ್ ಅವರ ರಾಗಿ, ಶೇಂಗಾ ಬೆಳೆಗಳ ತಾಕಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಮಳೆ ಕೊರತೆಯಿಂದಾಗಿ 2 ಎಕರೆಯಲ್ಲಿನ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದೆ ಎಂದು ತಂಡದ ಗಮನಕ್ಕೆ ತಂದರು. ತಂಡವು ಅವರೊಂದಿಗೆ ಸಂವಾದ ನಡೆಸಿತು. ಚೊಕ್ಕಹಳ್ಳಿ ಭೇಟಿ ನಂತರ ತಂಡವು ತಾಲ್ಲೂಕಿನ ಬಂಡಮ್ಮನಹಳ್ಳಿ ಗ್ರಾಮದ ರೈತ ಮಹಿಳೆ ನಾಗಮ್ಮ ಮತ್ತು ದೊಡ್ಡೇಗಾನಹಳ್ಳಿ ನರಸಿಂಹಯ್ಯ ಅವರ ರಾಗಿ ತಾಕುಗಳಿಗೆ ಭೇಟಿ ನೀಡಿದರು. ಅವರೊಂದಿಗೆ ಸಮಾಲೋಚಿಸಿದರು.
ಈ ವೇಳೆ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ‘ಶ್ರೀನಿವಾಸ ಸಾಗರವನ್ನು ಸಂಪರ್ಕಿಸುವ ನೀರಿನ ಕಾಲುವೆ’ಯನ್ನು ವೀಕ್ಷಣೆ ಮಾಡಿದರು.
ನಂತರ ಗೌರಿಬಿದನೂರು ತಾಲ್ಲೂಕಿನ ಗಂಗಸಂದ್ರದ ರೈತ ಗಂಗಾಧರರೆಡ್ಡಿ ಅವರ 0.40 ಹೆಕ್ಟೇರ್ ಪ್ರದೇಶದ ರಾಗಿ ಬೆಳೆಯನ್ನು, ಜಕ್ಕೇನಹಳ್ಳಿ ಗ್ರಾಮದ ರೈತ ರೆಡ್ಡಪ್ಪ ಅವರ 0.84 ಹೆಕ್ಟೆರ್ ಪ್ರದೇಶದ ಮುಸುಕಿನಜೋಳದ ಬೆಳೆಯನ್ನು ಹಾಗೂ ಕಡಬೂರು ಗ್ರಾಮದ ಜಿ.ವೆಂಕಟೇಶ್ 0.40 ಪ್ರದೇಶದ ಮುಸುಕಿನ ಜೋಳದ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಕೊನೆಯದಾಗಿ ಕೆಂಗೇನಹಳ್ಳಿ ಗ್ರಾಮದ ರೈತ ಬಾಬುರೆಡ್ಡಿ ಅವರ ನೀರಾವರಿ ಆಶ್ರಿತ ಮುಸುಕಿನ ಜೋಳದ ಬೆಳೆಯನ್ನು ವೀಕ್ಷಣೆ ಮಾಡಿ ಚೆನ್ನಾಗಿ ಬೆಳೆದ ಬೆಳೆಯನ್ನು ಹಾಗೂ ಮಳೆ ಇಲ್ಲದೆ ಹಾನಿಯಾಗಿರುವ ಇತರ ಬೆಳೆಗಳ ಕುಂಟಿತದ ವ್ಯತ್ಯಾಸದ ನಷ್ಟವನ್ನು ತುಲನಾತ್ಮಕವಾಗಿ ಅರಿಯುವ ಪ್ರಯತ್ನವನ್ನು ತಂಡವು ಮಾಡಿತು.
ಪ್ರವಾಸದ ವೇಳೆ ರೈತ ಸಂಘಟನೆಗಳ ಮುಖಂಡರುಗಳು, ರೈತರು ಜಿಲ್ಲೆಗೆ ಹೆಚ್ಚಿನ ಬರ ಪರಿಹಾರ ನೀಡುವ ಸಂಬಂಧ ಮನವಿ ಸಲ್ಲಿಸಿ, ಬರ ಅಧ್ಯಯನ ತಂಡದೊಂದಿಗೆ ಸಂವಾದ ನಡೆಸಿದರು. ಬರ ಅಧ್ಯಯನ ತಂಡವು ಜಿಲ್ಲೆಯಲ್ಲಿ ನಿರಂತರವಾಗಿ 7 ತಾಸು ಬರ ಅಧ್ಯಯನ ನಡೆಸಿ ತುಮಕೂರು ಜಿಲ್ಲೆಯತ್ತ ಪ್ರಯಾಣ ಬೆಳೆಸಿತು.
ಕ್ಷೇತ್ರ ವೀಕ್ಷಣೆ ಸಂದರ್ಭದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರು ಹೆಚ್.ಸಿ ಗಿರೀಶ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಲಾನಯನ ಅಭಿವೃದ್ಧಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಜೈಸ್ವಾಮಿ, ಅಪರ ಜಿಲ್ಲಾಧಿಕಾರಿ ಡಾ|| ಎನ್. ತಿಪ್ಪೇಸ್ವಾಮಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ಎನ್.ಭಾಸ್ಕರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಗಾಯಿತ್ರಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ರವಿ, ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೇಶವರೆಡ್ಡಿ, ಮೋಹನ್, ತಹಸೀಲ್ದಾರ್ ಅನಿಲ್ ಕುಮಾರ್ ಮತ್ತು ಮಹೇಶ್ ಪತ್ರಿ ಹಾಗೂ ಜಿಲ್ಲಾ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.