ಸುದ್ದಿಮೂಲ ವಾರ್ತೆ
ಮೈಸೂರು, ಅ.4 : ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ತಡೆಯುವ ನಿಟ್ಟಿನಲ್ಲಿ ಅ. 13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾ ಹಮ್ಮಿಕೊಂಡಿದ್ದು, 5 ಸಾವಿರ ಮಂದಿ ಭಾಗವಹಿಸವರು ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ ಪಾದ ಹಾಗೂ ವಿಶ್ವವಿದ್ಯಾಲಯದ ಆವರಣದಿಂದ ಜನ ಚಾಮುಂಡಿಬೆಟ್ಟಕ್ಕೆ ತೆರಳಿ,ದೇವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿ ಹಾಗು ಸಿಟಿ ಪೊಲೀಸ್ ಕಮಿಷನರ್ ಬಳಿ ತೆರಳಿ ಮಹಿಷ ದಸರಾಗೆ ಅನುಮತಿ ನೀಡದಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಟಿಪ್ಪು ಹೈದರಾಲಿ ಕಾಲ ಬಿಟ್ರೆ 414 ವರ್ಷದಿಂದ ನಿರಂತರವಾಗಿ ಮೈಸೂರು ದಸರಾ ನಡೆದುಕೊಂಡು ಬರುತ್ತಿದೆ . ಮೈಸೂರು ಜನರಿಗೆ ದಸರಾ ಅಂದ್ರೆ ಏನು, ನವರಾತ್ರಿ ಅಂದ್ರೆ ಏನು ಅಂತ ಗೊತ್ತು. 2015ರಲ್ಲಿ ಮಹಿಷ ದಸರಾ ಎನ್ನುವ ಅಸಹ್ಯ ಹುಟ್ಟುಹಾಕಿದ್ದಾರೆ ಎಂದು ಟೀಕಿಸಿದರು.
ಅಂದು, ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಎಂದು ಮೆರವಣಿಗೆ ಮಾಡಲಾಯಿತು. ಆಗಿನ ಸಿದ್ದರಾಮಯ್ಯ ಸರ್ಕಾರ ಅದನ್ನು ನಿಲ್ಲಿಸಲಿಲ್ಲ. ಇಲ್ಲಿ ಭಕ್ತರ ಭಾವನೆಗೆ ನೋವಾಗುವುದನ್ನು ನಿಲ್ಲಿಸುವಂತೆ ಕೋರಿದ ಮನವಿಗೆ ಅಂದಿನ ಸಚಿವ ಸೋಮಣ್ಣ ಸ್ಪಂದಿಸಿದ್ದರು. ಬಳಿಕ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಇಂತಹ ಅಸಹ್ಯವನ್ನು ಮಟ್ಟ ಹಾಕುವ ಕೆಲಸ ಆಗಿತ್ತು. ಈಗ ಮತ್ತೆ ಶುರುವಾಗಿದೆ ಇದನ್ನು ನಿಲ್ಲಿಸುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.