ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.1: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ತೀವ್ರ ತಪಾಸಣೆಗೆ ಇಳಿದಿರುವ ಚುನಾವಣಾಧಿಕಾರಿಗಳು ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಿ 504 ಕುಕ್ಕರ್ಗಳನ್ನು ಜಪ್ತಿ ಮಾಡಿದ್ದಾರೆ.
ಕೋರಮಂಗಲ 4ನೇ ಹಂತದಲ್ಲಿರುವ ಅನಿಲ್ ಶೆಟ್ಟಿ ಮನೆಯಲ್ಲಿ ಕುಕ್ಕರ್ ಸಂಗ್ರಹಿಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮತದಾರರ ನೋಂದಣಾಧಿಕಾರಿ ವರಲಕ್ಷ್ಮಮ್ಮ ನೇತೃತ್ವದ ತಂಡ ಮಾರ್ಚ್ 28ರಂದು ದಾಳಿ ಮಾಡಿದೆ ಎಂದು ಪೊಲೀಸರು ಹೇಳಿದರು.
ದಾಳಿ ವೇಳೆ ಅನಿಲ್ ಶೆಟ್ಟಿ ಮನೆಯಲ್ಲಿ ಇರಲಿಲ್ಲ. ಮತದಾರರಿಗೆ ಹಂಚಲೆಂದು ಕುಕ್ಕರ್ ಸಂಗ್ರಹಿಸಿಟ್ಟಿದ್ದು ಗೊತ್ತಾಗಿದೆ. ಮನೆಯ ನೆಲ ಮಹಡಿ ಕೊಠಡಿಯಲ್ಲಿ 10 ಕುಕ್ಕರ್ ಹಾಗೂ 2ನೇ ಮಹಡಿಯ ಕೊಠಡಿಯಲ್ಲಿ 494 ಕುಕ್ಕರ್ಗಳು ಪತ್ತೆಯಾಗಿವೆ. ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.