ಸುದ್ದಿಮೂಲ ವಾರ್ತೆ
ಹೊಸಪೇಟೆ,ಜೂ.30:ಬಕ್ರೀದ್ ಹಬ್ಬದ ಆಚರಣೆಯಲ್ಲಿದ್ದ ಬಳ್ಳಾರಿಯ ಕೌಲ್ಬಜಾರ್ನ ಗೌತಮನಗರ ನಿವಾಸಿಗಳು ಪ್ರಯಾಣಿಸುತ್ತಿದ್ದ ಆಟೋ ಮತ್ತು ಲಾರಿ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್ಬಳಿ ಡಿಕ್ಕಿಯಾದ ಕಾರಣ ಆಟೋದಲ್ಲಿದ್ದ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಕುಟುಂಬದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 2 ಲಕ್ಷ ಪರಿಹಾರ, ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಘೋಷಣೆ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರ ಜೊತೆ ಮಾತನಾಡಿದ್ದಾರೆ.
ಬಕ್ರೀದ್ ಹಬ್ಬದ ಆಚರಣೆಯ ನಂತರ, ಮುಸ್ಲಿಮರು ವಿಹಾರತಾಣಗಳಿಗೆ ಭೇಟಿ ನೀಡುವುದು ಸಹಜ. ಈ ನಿಟ್ಟಿನಲ್ಲಿ ಗೌತಮನಗರದ ನಿವಾಸಿಗಳು ಆಟೋದಲ್ಲಿ ತುಂಗಭದ್ರಾ ಜಲಾಶಯ ವೀಕ್ಷಣೆ ಮಾಡಿ ಶುಕ್ರವಾರ ಹಿಂದಿರುಗುತ್ತಿದ್ದಾಗ ವಡ್ಡರಹಳ್ಳಿ ಬಳಿ ಎದುರಿನಿಂದ ಬಂದ ಹೆವ್ವಿಲಾರಿಯು ಮುಖಾಮುಖಿ ಆದ ಕಾರಣ ಈ ದುರ್ಗಟನೆ ನಡೆದಿದೆ.
ಈ ಘಟನೆಯಲ್ಲಿ ಆಟೋದಲ್ಲಿದ್ದ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ವಿಮ್ಸ್ ನಿರ್ದೇಶಕ ಡಾ. ಬಿ. ಗಂಗಾಧರಗೌಡ ಅವರ ಜೊತೆ ಮತ್ತು ಸಂಬಂಧಿಸಿದ ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಶಾಸಕ ಎಚ್.ಆರ್. ಗವಿಯಪ್ಪ ಪ್ರತಿಕ್ರಿಯೆ : ಶಾಸಕ ಎಚ್. ಆರ್. ಗವಿಯಪ್ಪ ಅವರು, ಬಕ್ರಿದ್ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದವರು ಅಸುನೀಗಿದ್ದು ದುಃಖಕರ ಸಂಗತಿ. ಅಪಘಾತ ನಡೆದ ಸ್ಥಳದಲ್ಲಿ ಸೇತುವೆ ಕಾಮಗಾರಿ ಅಪೂರ್ಣವಾಗಿದೆ. ಕಾರಣ ಅಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.