ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.14: ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ ವಿವಿಧ ಅಭಿವೃದ್ಧಿ ಯೋಜನೆಯ ಹಣ ಅಕ್ರಮವಾಗಿ ವಿವಿಧ ಬ್ಯಾಂಕ್ಗಳಲ್ಲಿ ಜಮೆ ಇದ್ದ 612 ಕೋಟಿ ರೂ. ಸರ್ಕಾರಕ್ಕೆ ಹಿಂಪಡೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ಗೆ ತಿಳಿಸಿದರು.
ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಎಚ್.ಕೆ. ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಪತ್ತೆ ಮಾಡಿದಾಗ ಇಲಾಖೆಗೆ ಸಂಬಂಧಿಸಿದ ಹಣ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ತೆಗೆದು ಜಮೆ ಮಾಡಿದ್ದು ಬಯಲಾಗಿತ್ತು. ಆಗ 12 ಕೋಟಿ ಹಣ ಹಿಂಪಡೆದು ಖಜಾನೆಗೆ ಜಮೆ ಮಾಡಲಾಗಿತ್ತು ಎಂದು ಹೇಳಿದರು.
ಈ ಪ್ರಕರಣದಲ್ಲಿ ಡಾ.ಪಿ. ಬೋರೇಗೌಡ, ರಾಮಕೃಷ್ಣ ಮತ್ತು ರಾಯಗೇರಿ ಎಂಬುವರು ತಪ್ಪಿತಸ್ಥರು ಎಂದು ಗೊತ್ತಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಬೋರೇಗೌಡ ಮತ್ತು ರಾಮಕೃಷ್ಣ ವಿರುದ್ಧ ಬಿ ರಿಪೋರ್ಟ್ ಸಲ್ಲಿಕೆಯಾಗಿದ್ದು, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಆದರೆ, ಇಲಾಖೆ ಜಮೆ ಮಾಡಿದ ಹಣಕ್ಕೆ ತಕ್ಕಂತೆ ಬ್ಯಾಂಕ್ನವರು ಬಡ್ಡಿ ನೀಡಿಲ್ಲ. 103 ಕೋಟಿ ರೂ. ಬಡ್ಡಿ ನೀಡಲು ಒಪ್ಪಿದ್ದು, ಆ ಹಣ ಪಡೆಯಲು ಕ್ರಮ ವಹಿಸಲಾಗುವುದು ಹಾಗೂ ಹೆಚ್ಚಿನ ಬಡ್ಡಿ ಪಡೆಯಲು ಸಹ ಪ್ರಯತ್ನ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸದನ ಸಮಿತಿ ವರದಿ ನೀಡಿದ್ದು ಹಣ ದುರುಪಯೋಗವಾಗಿಲ್ಲ ಎಂದು ತಿಳಿಸಿದೆ. ಆದರೆ, ಸರ್ಕಾರದ ಅನುಮತಿ ಇಲ್ಲದೆ ಖಾತೆ ತೆಗೆಯುವ ಕಾರಣ ಆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮುನಿರಾಜುಗೌಡ, ಕೇವಲ ಸಣ್ಣ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗಿದೆ. ಮೂರು ಐಎಎಸ್ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಹಾಗೂ ಬ್ಯಾಂಕ್ನವರ ಕೈವಾಡ ಸಹ ಇದೆ. 612 ಕೋಟಿ ರೂಪಾಯಿಗೆ ಐದು ವರ್ಷದಲ್ಲಿ ದ್ವಿಗುಣ ಬಡ್ಡಿ ಆಗಬೇಕು. ಆದರೆ, ಕೇವಲ 103 ಕೋಟಿ ರೂ. ನೀಡುತ್ತಿದ್ದು, ಸರ್ಕಾರದ ಹಣ ನಷ್ಟವಾಗಿದೆ. ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಬಡ್ಡಿ ಹಣ ವಸೂಲಿ ಮಾಡಲು ಒತ್ತಾಯಿಸಿದರು.
ಪರಿಶಿಷ್ಟರ ಹಣ ಖರ್ಚು ಮಾಡಲು ಸೂಚನೆ
ಗ್ರಾ.ಪಂ.ಗಳಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾದ ಹಣ ಸಮರ್ಪಕವಾಗಿ ಖರ್ಚು ಮಾಡಲು ಸೂಚನೆ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಮ್ಮಯ್ಯ ಅವರಿಗೆ ಉತ್ತರಿಸಿದ ಅವರು, ಪರಿಶಿಷ್ಟರ ಅನುದಾನ ಖರ್ಚು ಮಾಡುವುದು ಶಾಸನಬದ್ಧ ಕ್ರಮವಾಗಿದ್ದು ಯಾವುದೇ ವಿಳಂಬವಿಲ್ಲದೆ ಆ ಹಣ ಖರ್ಚು ಮಾಡಲು ಸೂಚನೆ ನೀಡಲಾಗುವುದು ಎಂದರು.