ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ.12: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲೂಕಿನಲ್ಲಿ ಪ್ರಾರಂಭವಾದಾಗಿನಿಂದ ಇದುವರೆಗೆ 650 ಕೋಟಿ ಸಾಲವನ್ನು ವಿತರಣೆ ಮಾಡುವ ಮೂಲಕ ಸಹಸ್ರಾರು ಕುಟುಂಬಗಳ ಅಭಿವೃದ್ದಿಗೆ ಶ್ರಮಿಸಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಹೆಚ್.ಎನ್.ಮಂಜುನಾಥ್ ತಿಳಿಸಿದರು.
ಹೊಸಕೋಟೆ ತಾಲೂಕಿನ ತಿರುಮಲ ಶೆಟ್ಟಿಹಳ್ಳಿ ಕ್ರಾಸ್ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ 3500 ಸ್ವಸಹಾಯ, ಒಂದು ಸಾವಿರ ರೈತ ಗುಂಪುಗಳಿದ್ದು 35 ಸಾವಿರ ಕುಟುಂಬಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದೆ. ಗ್ರಾಮಾಭಿವೃದ್ದಿ ಯೋಜನೆ ಗ್ರಾಮೀಣ ಭಾಗದಲ್ಲಿ ಬಡ ಮಧ್ಯಮ ವರ್ಗದವರ ಅಭಿವೃದ್ದಿಗೆ ಭದ್ರ ಬುನಾದಿ ಹಾಕಿದ್ದು ಸ್ವಸಹಾಯ ಗುಂಪುಗಳ ಮೂಲಕ ಸಾಲ
ವಿತರಣೆ ಜೊತೆಗೆ ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರದ ಅಭಿವೃದ್ದಿಗೂ ಹಲವಾರು ರೀತಿಯಲ್ಲಿ ನೆರವನ್ನು ಕಲ್ಪಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕನಸಿದ ಕೂಸಾದ ಗ್ರಾಮಾಭಿವೃದ್ದಿ ಯೋಜನೆ ಸಾಕಷ್ಟು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಬಡವರ ಅಭಿವೃದ್ದಿಗೆ ಕೆಲಸ ಮಾಡುತ್ತಿದ್ದು ಸಹಸ್ರಾರು ಸಿಬ್ಬಂದಿ ಅವಿರತ ಶ್ರಮಿಸುತ್ತಿದ್ದಾರೆ ಎಂದರು.
ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಶಂಕರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ
ಸಾಕಷ್ಟು ಶಿಸ್ತಿನಿಂದ ಸ್ವ ಸಹಾಯ ಸಂಘಗಳನ್ನು ರಚಿಸಿ, ಸಾಲ ವಿತರಣೆ ಮಾಡಿ ಯಶಸ್ವಿಯಾಗಿ ಸಾಲ ವಸೂಲಾತಿ ಸಹ ಮಾಡುತ್ತಿದೆ. ಪ್ರಮುಖವಾಗಿ ಜಾತಿ, ಧರ್ಮ ಬೇಧ ಮರೆತು ಸಂಘಗಳನ್ನು ರಚಿಸಿ ಸೌಲಭ್ಯ ಪಡೆದುಕೊಳ್ಳುತ್ತಿರುವುದು ಗ್ರಾಮೀಣ ಭಾಗದಲ್ಲಿ ಕಾಣಬಹುದಾಗಿದೆ.
ಇಂತಹ ಸಂಸ್ಥೆ ಮತ್ತಷ್ಟು ಅಭಿವೃದ್ದಿಗೆ ಸದಸ್ಯರು ಶ್ರಮಿಸಬೇಕು. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಮತ್ತೊಂದಿಷ್ಟು ಸಂಘಗಳ ಸದಸ್ಯರಿಗೆ ಅನುಕೂಲ ಆಗಲಿದೆ ಎಂದರು.
ಸಮನ್ವಯಾಧಿಕಾರಿ ನಿಶ್ಮಿತಾ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟಿ ರಾಮಸ್ವಾಮಿ, ಕಲ್ಕುಂಟೆ ಅಗ್ರಹಾರ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ್, ಗ್ರಾಪಂ ಸದಸ್ಯ ಹಾರೋಹಳ್ಳಿ ಬಾಲಚಂದ್ರ, ಮುಖಂಡ ಹಾರೋಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.