ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಅ.30:ರೇಷ್ಮೆನಗರಿ ಶಿಡ್ಲಘಟ್ಟದಲ್ಲಿ ಕನ್ನಡಪರ ನಾನಾ ಸಂಘಟನೆಗಳ ಒಕ್ಕೂಟ ‘ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ನ.1ರಂದು ಶಿಡ್ಲಘಟ್ಟದಲ್ಲಿ 67 ನೇ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಮಾನ ಮನಸ್ಕರ ಹೋರಾಟ ಸಮಿತಿಯ ವಿಸ್ಡಂ ನಾಗರಾಜ್ ಹೇಳಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಸಾರಿಗೆ ಬಸ್ ನಿಲ್ದಾಣದಲ್ಲಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಶಾಸಕ ಬಿ.ಎನ್.ರವಿಕುಮಾರ್ ಹಾಗೂ ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರು ಕನ್ನಡ ರಾಜ್ಯೋತ್ಸವದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ತಾಲ್ಲೂಕಿನ 28 ಗ್ರಾ.ಪಂ. ಗಳಿಂದ ತಾಯಿ ಭುವವೇಶ್ವರಿಯ ಪಲ್ಲಕಿಯೊಂದಿಗೆ 20 ವಿದ್ಯಾರ್ಥಿಗಳಿಂದ ಕನ್ನಡ ಭಾವುಟಗಳು ಹಾಗೂ ಪ್ರಥಮ ದರ್ಜೆ ಕಾಲೇಜು ವತಿಯಿಂದ 150 ಅಡಿ ಉದ್ದ ಹಾಗೂ 8 ಅಡಿ ಅಗಲದ ಕನ್ನಡ ಧ್ವಜದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಮದ್ಯಾಹ್ನ 1 ಗಂಟೆಗೆ ಕೋಟೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಂಜೆ ಅದೆ ಪುನಿತ್ ರಾಜಕುಮಾರ್ ವೇದಿಕೆಯಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಕನ್ನಡ ಅಭಿಮಾನಿಗಳು ವರ್ತಕರು, ಮಾದ್ಯಮ ಮಿತ್ರರು, ರೈತಾಪಿ ವರ್ಗ, ದಲಿತಪರ ಸಂಘಟನೆಗಳು, ವಿವಿಧ ಸಂಘಟನೆಗಳು ಸಹಯೋದೊಂದಿಗೆ ಈಭಾರಿ ಅದ್ದೂರಿಯೊಂದಿಗೆ ಆಚರಣೆ ಮಾಡುತ್ತಿದ್ದೇವೆ ಎಂದರು.
ಸಮಾನ ಮನಸ್ಕರ ಹೋರಾಟ ಸಮಿತಿಯ ರಾಮಾಂಜಿ ಮಾತನಾಡಿ ಡಾ.ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ನಟ ವಿನೋದ್ ಪ್ರಭಾಕರ್, ಹಾಸ್ಯ ನಟ ಟೆನ್ನೀಸ್ ಕೃಷ್ಣ, ಮಿಮಿಕ್ರಿ ಕಲಾವಿದ ದೀಕ್ಷಿತ್, ಉದಯಟಿವಿಯ ಕಾಮಿಡಿ ನಟಿ ರಾಜೇಶ್ವರಿ ಇನ್ನಿತರರು ಭಾಗವಹಿಸಲಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ನಾನಾ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ. ಕನ್ನಡ ರಾಜ್ಯೋತ್ಸವ ಆಚರಣೆಯ ದಿನದಂದು ನಗರದಲ್ಲಿ ಮನೆ ಮನೆ ಮುಂದೆ ರಂಗೋಲೆ ಹಾಕಿ ದೀಪ ಹಚ್ಚಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎಂ.ರವಿಪ್ರಕಾಶ್, ಪ್ರತೀಶ್, ದೀಪು, ಮಂಜುನಾಥ್, ಮಧುಲತಾ, ಸುನೀಲ್, ಸೋಮಶೇಖರ್, ಮಂಜುನಾಥ್ ಇನ್ನಿತರರು ಹಾಜರಿದ್ದರು.