ಸುದ್ದಿಮೂಲ, ವಾರ್ತೆ
ಮೈಸೂರು, ಮೇ 5: ಕಾಂಗ್ರೆಸ್ ಸರ್ಕಾರಗಳಿಂದಲೇ ಶೇ 85 ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆ ಪಕ್ಷದ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರೇ ಒಪ್ಪಿಕೊಂಡಿದ್ದರು. ಆದರೆ ಕಾಂಗ್ರೆಸ್ನವರು ಬಿಜೆಪಿ ಸರ್ಕಾರ ಶೇ 40 ಕಮಿಷನ್ ಭ್ರಷ್ಟಚಾರ ಸರ್ಕಾರ ಎಂದು ಸುಮ್ಮನೆ ಆರೋಪಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ನೀಡುತ್ತಿಲ್ಲ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಟೀಕಿಸಿದ್ದಾರೆ.
ಗುರುವಾರ ಪಕ್ಷದ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರನ್ನು ಸ್ವಂತ ಊರಿನಲ್ಲಿಯೇ ಮನೆಗೆ ಕಳುಹಿಸುವುದು. ಕಳೆದ ಚುನಾವಣೆಯಲ್ಲಿಯೇ ಸಿದ್ದರಾಮಯ್ಯ ಕೊನೇ ಚುನಾವಣೆ ಎಂದಿದ್ದರು. ಈ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ನಾವೇ ಕೊನೇ ಚುನಾವಣೆ ಮಾಡಲಿದ್ದೇವೆ ಎಂದರು.
2008ರ ಚುನಾವಣೆಯಲ್ಲಿ 110, 2013 ಚುನಾವಣೆಯಲ್ಲಿ ನಮಲ್ಲಿನ ವ್ಯತ್ಯಾಸದಿಂದ ಬಹುಮತ ಬರಲಿಲ್ಲ. 2018ರಲ್ಲೂ 104 ಸ್ಥಾನಗಳು ಬಿಜೆಪಿಗೆ ಲಭಿಸಿದವು. 2023ರ ಚುನಾವಣೆಯಲ್ಲಿ 130 ಸ್ಥಾನಗಳು ಬಿಜೆಪಿಗೆ ದೊರೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ದೇಶ ಹಾಗೂ ರಾಜ್ಯವನ್ನು ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದೆ. ಜೆಡಿಎಸ್ 10 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಬಿಜೆಪಿ 9 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಈ ಮೂರು ಪಕ್ಷಗಳು ಎಷ್ಟು ಭರವಸೆಗಳನ್ನು ಜನರಿಗೆ ನೀಡಿದ್ದವು. ಎಷ್ಟನ್ನು ಈಡೇರಿಸಿವೆ ಎಂಬುದರ ಬಗ್ಗೆ ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟು ಮತಯಾಚನೆ ಮಾಡೋಣ ಎಂದು ಸವಾಲು ಹಾಕಿದರು.
ಹತಾಶರಾದವರು ಗೂಂಡಾಗಿರಿ ಮಾಡುತ್ತಾರೆ. ಅಪಪ್ರಚಾರಕ್ಕೆ ಒತ್ತು ಕೊಡುತ್ತಾರೆ. ಸೋಲಿನ ಭಯ ಇರುವವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾರೆ. ಈ ಮೂರನ್ನು ಸಿದ್ದರಾಮಯ್ಯ ಅವರಿಗೆ ಅನ್ವಯಿಸಬಹುದು.
ಜಿಡಿಟಿ ವ್ಯಕ್ತಿಗತ ವಿಶ್ವಾಸರಲ್ಲ:
ಶಾಸಕ ಜಿ.ಟಿ.ದೇವೇಗೌಡ ಅವರು ವ್ಯಕ್ತಿಗತವಾಗಿ ವಿಶ್ವಾಸಕ್ಕೆ ಅರ್ಹರಲ್ಲ ಎಂಬುದು ಜನರ ಮಾತುಗಳಿಂದಲೇ ತಿಳಿದುಬಂದಿದೆ. ಅವರು ಪಕ್ಷಾಂತರ ಮಾಡಲು ನಿಸ್ಸೀಮರು ಎಂದು ಸದಾನಂದಗೌಡ ಟೀಕಿಸಿದರು.