ಬೆಂಗಳೂರು: ಕಾಂಗ್ರೆಸ್ ಪಕ್ಷವು ‘ಪ್ರಜಾಧ್ವನಿ’ ಬಸ್ಸಿನಲ್ಲಿರುವ ಸೀಟಿನಷ್ಟು ಶಾಸಕರನ್ನು ರಾಜ್ಯದಲ್ಲಿ ಗೆದ್ದರೆ ಅದೇ ಹೆಚ್ಚು. ಕಾಂಗ್ರೆಸ್, 40ರಿಂದ 50 ಶಾಸಕ ಸ್ಥಾನ ಗೆಲ್ಲುವುದೂ ಅಸಾಧ್ಯ ಎಂದು ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ|| ಸಿ.ಎನ್.ಅಶ್ವತ್ಥ್ನಾರಾಯಣ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 120ಕ್ಕಿಂತ ಹೆಚ್ಚಿದ್ದ ಸ್ಥಾನಗಳನ್ನು 79ಕ್ಕೆ ತಂದ ಸಾಧನೆಯೇ ಸಿದ್ದರಾಮಯ್ಯರದು ಎಂದರು. ನಿದ್ರೆ ರಾಮಯ್ಯ, ಎಸಿಬಿ ರಾಮಯ್ಯ ಸೇರಿ ಹಲವು ಹೆಸರು ಅವರಿಗಿದೆ ಎಂದು ತಿಳಿಸಿದರು.
ಸಂವಿಧಾನದ ಆಶಯವನ್ನು ಗೌರವಿಸದ, ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ ಪಕ್ಷ ಕಾಂಗ್ರೆಸ್. ಭಯಭೀತ ಕಾಂಗ್ರೆಸ್ಸಿಗರು ಹಗಲುಗನಸಿನೊಂದಿಗೆ ಯಾತ್ರೆ ಮಾಡುತ್ತಿದ್ದಾರೆ. 50 ಸೀಟಿನೊಂದಿಗೆ ಎರಡನೇ ಸ್ಥಾನ ಜೆಡಿಎಸ್ಗೆ ಸಿಗುತ್ತದೋ ಅಥವಾ ಕಾಂಗ್ರೆಸ್ ಪಕ್ಷಕ್ಕೋ ಎಂದು ನೋಡಬೇಕಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಕನಿಷ್ಠ ಸ್ಥಾನಕ್ಕೆ ಇಳಿದಂತೆ ಇಲ್ಲಿಯೂ ಆಗಲಿದೆ. ಆ ಪಕ್ಷವು ಭರವಸೆ ಇಲ್ಲದೆ ಸೊರಗಿದೆ ಎಂದು ನುಡಿದರು.
ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ‘ಪ್ರಜಾಧ್ವನಿ’ ಪ್ರವಾಸವು ಅರ್ಥಹೀನ ಎಂದು ಟೀಕಿಸಿದರಲ್ಲದೆ, ಕಾಂಗ್ರೆಸ್ ಪಕ್ಷದೊಳಗೆ ಅವರು ಪ್ರಜಾಪ್ರಭುತ್ವ, ಪ್ರಜಾಧ್ವನಿಗೆ ಗೌರವ ಕೊಟ್ಟಿಲ್ಲ. ಆ ಪಕ್ಷದ ಮೂಲಸ್ತಂಭವೇ ಕುಟುಂಬ. ಆ ಪಕ್ಷದಲ್ಲಿ ಪ್ರಜಾಪ್ರಭುತ್ವಕ್ಕೆ ಏನೂ ಮಹತ್ವ ಇಲ್ಲ. ಮಾನ್ಯತೆಯೂ ಇಲ್ಲ. ಆ ಪಕ್ಷವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅದರ ಇಚ್ಛೆ, ಮೂಲ ಉದ್ದೇಶಗಳನ್ನು ಹೇಗೆ ಈಡೇರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಮಹದಾಯಿ ಸಮಸ್ಯೆ ಬಗೆಹರಿಸಲು ಅವರಿಗೆ ಆಗಿರಲಿಲ್ಲ. ನಮ್ಮ ಮುಖ್ಯಮಂತ್ರಿ ಬೊಮ್ಮಾಯಿಯವರ ನಾಯಕತ್ವ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಕೇಂದ್ರ ಸರಕಾರದ ನೆರವಿನಿಂದ ಡಿಪಿಆರ್ ಒಪ್ಪಿಗೆ ಪಡೆದು ಅನುಷ್ಠಾನಕ್ಕೆ ಬರುತ್ತಿದೆ. ಎತ್ತಿನಹೊಳೆ ವಿಚಾರದಲ್ಲೂ ಅಷ್ಟೇ. ಅದನ್ನು ಬದ್ಧತೆಯಿಂದ ಜಾರಿಗೊಳಿಸುತ್ತಿದ್ದೇವೆ. ಕೃಷ್ಣಾ ಸೇರಿ ನೀರಾವರಿ ವಿಚಾರದಲ್ಲಿ ಬಹಳಷ್ಟು ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇವೆ. ವಿವೇಕಾನಂದ ಕಾರ್ಯಕ್ರಮದ ಮೂಲಕ ರಾಜ್ಯದ ಉದ್ದಗಲಕ್ಕೆ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಒಕ್ಕಲಿಗರ ನಿಗಮಕ್ಕೆ ಹಣ ಕೊಟ್ಟಿಲ್ಲ ಎಂಬ ಆಪಾದನೆ ಸತ್ಯಕ್ಕೆ ದೂರವಾದುದು. ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡದೆ ಸುಳ್ಳು ಹೇಳುತ್ತಿರುವವರ ಯಾತ್ರೆ ಇದೆಂದು ಆಕ್ಷೇಪಿಸಿದರು.
ಪಕ್ಷದ ಮುಖಂಡರನ್ನು ಮೊದಲು ಜೋಡಿಸಲು ಸವಾಲು
ದಲ್ಲಾಳಿಗಳು, ಮಧ್ಯವರ್ತಿಗಳನ್ನು ಬೆಳೆಸಿದ ಸಂಸ್ಕøತಿ ಡಿ.ಕೆ.ಶಿವಕುಮಾರ್ ಅವರದು. ಪಟ್ಟಿ ಮಾಡಿರುವುದು ಶಿವಕುಮಾರ್-ಸಿದ್ದರಾಮಯ್ಯ ಅವರದ್ದು. ಅಧಿಕಾರ ದುರ್ಬಳಕೆ ಮಾಡಿ ಭ್ರಷ್ಟಾಚಾರ ಸಂಸ್ಕøತಿ ಬೆಳೆಸಿದವರು ಕಾಂಗ್ರೆಸ್ಸಿಗರು. ರಾಹುಲ್ ಗಾಂಧಿಯವರು ಭಾರತ್ ಜೋಡೋ ಮಾಡುತ್ತಿದ್ದಾರೆ. ಅವರು ಮೊದಲು ಶಿವಕುಮಾರ್-ಸಿದ್ದರಾಮಯ್ಯ ಅವರನ್ನು ಜೋಡಿಸಲಿ ಎಂದು ಡಾ.ಸಿ.ಎನ್.ಅಶ್ವತ್ಥ್ನಾರಾಯಣ್ ಅವರು ಸವಾಲು ಹಾಕಿದರು.
ಕೆ.ಎಚ್.ಮುನಿಯಪ್ಪ, ಪರಮೇಶ್ವರ್, ಖರ್ಗೆ ಸೇರಿ ಹಲವಾರು ನಾಯಕರಿದ್ದಾರೆ. ಇವರ ನಾಯಕರನ್ನು ಜೋಡಿಸಿ ಪಕ್ಷ ಮುಂದೆ ತೆಗೆದುಕೊಂಡು ಹೋಗಬೇಕಿದೆ. ಕಾಂಗ್ರೆಸ್ ಪಕ್ಷವು ವ್ಯಕ್ತಿ ಆಧಾರಿತವಾಗಿದೆ. ನಾವು ಪಕ್ಷ- ಕಾರ್ಯಕರ್ತರ ಆಧರಿತವಾಗಿ ಕೆಲಸ ಮಾಡುತ್ತಿದ್ದೇವೆ. ಇದುವೇ ವ್ಯತ್ಯಾಸ ಎಂದು ತಿಳಿಸಿದರು.
ಸ್ವಾರ್ಥ ರಾಜಕಾರಣ, ಹಿಂದೂ ಧರ್ಮ ವಿಭಜನೆಗೆ ಯತ್ನ, ಜಾತಿ ಭೇದ, ಭ್ರಷ್ಟಾಚಾರ ಮಾಡಿದ್ದು, ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಹಿಂದಕ್ಕೆ ಪಡೆದ ಕಾಂಗ್ರೆಸ್ಸಿಗರು ಇವತ್ತು ಭ್ರಷ್ಟಾಚಾರ ಕುರಿತು ಮಾತನಾಡುತ್ತಾರೆ. 40 ಶೇಕಡಾ ಬಗ್ಗೆ ಮಾತನಾಡುತ್ತಾರೆ. ಶೇ 40ರಿಂದ ಶೇ 100 ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್ನವರು. ಅವರು ಮಾಡಿದ ಕೆಲಸಗಳನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ಸಾಕ್ಷಿ, ಆಧಾರಗಳಿಲ್ಲದೆ ಆಪಾದನೆ ಮಾಡುತ್ತಿದ್ದು, ಆರೋಪ ಮಾಡಿದ ಗುತ್ತಿಗೆದಾರರು ಸೆರೆಮನೆಗೆ ಹೋಗಿದ್ದಾರೆ. ಇವರ ಕುಮ್ಮಕ್ಕಿನಿಂದ ಗುತ್ತಿಗೆದಾರ ನ್ಯಾಯಾಲಯದಲ್ಲಿ ಕಣ್ಣೀರು ಹಾಕುವಂತಾಗಿದೆ ಎಂದು ವಿವರಿಸಿದರು.
ಕಾಂಗ್ರೆಸ್ನವರು ತಡಕಾಟ, ಹುಡುಕಾಟದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದವರು ಸಂಪೂರ್ಣ ಹತಾಶ ಸ್ಥಿತಿಯಲ್ಲಿದ್ದಾರೆ. ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಯ ಭಯದಿಂದ ತಡೆಯಾಜ್ಞೆ ತಂದ ಸ್ಟೇ ಸಿದ್ದರಾಮಯ್ಯನವರು ಬೇರೆಯವರ ಕುರಿತು ಅವಹೇಳನಕಾರಿ ಹೇಳಿಕೆ ಕೊಡುತ್ತಾರೆ ಎಂದು ಟೀಕಿಸಿದರು. ಪುಸ್ತಕದಲ್ಲಿ ಏನಿದೆ ಎಂದು ನೋಡಿ ಬಳಿಕ ಮಾನನಷ್ಟ ಮೊಕದ್ದಮೆ ಹಾಕಬಹುದಿತ್ತಲ್ಲವೇ ಎಂದು ಕೇಳಿದರು.
ಸಿದ್ದರಾಮಯ್ಯ ಸದನದಲ್ಲಿ ತಮ್ಮ ಪೌರುಷವನ್ನು ಯಾಕೆ ತೋರಿಸುತ್ತಿಲ್ಲ? ತುಂಬ ವಿಚಾರ ಗೊತ್ತಿದ್ದರೆ ಮಾತನಾಡಬಹುದಲ್ಲವೇ? ರಾಜ್ಯಕ್ಕೆ ಅತಿ ಹೆಚ್ಚಿನ ಸಾಲ ಪಡೆದುಕೊಂಡವರು ಸಿದ್ದರಾಮಯ್ಯ. ನಾವು ವಿಪರೀತ ಮಳೆ, ಕೋವಿಡ್ ಸೋಂಕಿನ ಕಾಲದಲ್ಲಿ ಆದಾಯ ಸಂಪೂರ್ಣ ಕುಸಿದ ಕಾರಣ ಸಾಲ ಪಡೆದೆವು. ಆಗ ಗರಿಷ್ಠ ಸಾಲ ಪಡೆದ ಸಿದ್ದರಾಮಯ್ಯರು ಈಗ 200 ಯೂನಿಟ್ ಕರೆಂಟ್ ಉಚಿತವಾಗಿ ಕೊಡುವ ಭರವಸೆ ಕೊಡುತ್ತಾರೆ. ಅಧಿಕಾರದಲ್ಲಿದ್ದಾಗ ಪವರ್ ಕಟ್ ಮಾಡಿ, ಬಜೆಟನ್ನು ಲೈಟ್ ಹಾಕಿ ಓದಿ ಮಂಡಿಸಿದ ಮಹಾಪುರುಷ ಅವರು ಎಂದು ತಿಳಿಸಿದರು.
ಶಿವಕುಮಾರ್ ಜಗತ್ ಪ್ರಖ್ಯಾತರು. ಅವರನ್ನು ಕಾನೂನಿನಡಿ ಪ್ರಶ್ನಿಸಬಾರದು. ಏನು ಭ್ರಷ್ಟಾಚಾರ ಮಾಡಿದರೂ ಮಾಡಪ್ಪ ಎನ್ನಬೇಕು. ಇವರ ಪಾಪದ ಕೊಡ ತುಂಬಿ ತುಳುಕಿ ಹರೀತಿದೆ. ಇವರನ್ನು ಸಂಪೂರ್ಣವಾಗಿ ಮನೆಗೆ ಕಳುಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಯಾಂಟ್ರೊ ರವಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸರಕಾರ ಸಿದ್ಧವಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ನದು ಕವರ್ ಆಪ್ ಆಪರೇಷನ್. ನಾವು ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ. ನೇರವಾಗಿ ಫಲಾನುಭವಿಗೆ ಸೌಲಭ್ಯವನ್ನು (ಡಿಬಿಟಿ) ತಲುಪಿಸುತ್ತಿದ್ದೇವೆ. ಭ್ರಷ್ಟಾಚಾರರಹಿತ ವ್ಯವಸ್ಥೆ ಕಟ್ಟಲು ನಾವು ಮುಂದಾಗಿದ್ದೇವೆ ಎಂದರು.
ಸಿದ್ದರಾಮಯ್ಯ ಅವರು 65 ವಯಸ್ಸಿನಲ್ಲೇ ನಿವೃತ್ತಿ ಘೋಷಿಸಿದ್ದರು. ಈಗ ಅಧಿಕಾರ ದಾಹದಿಂದ ಮುಂದುವರೆಯುತ್ತಿದ್ದಾರೆ. ಜಾತಿ ಭೇದಭಾವ, ಜಾತಿ ತಾರತಮ್ಯ, ಧರ್ಮ ವಿಭಜನೆ, ಭ್ರಷ್ಟಾಚಾರಕ್ಕಾಗಿ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯಲು ಬಯಸುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಯುವಕರ ಸಬಲೀಕರಣಕ್ಕಾಗಿ, ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಇವರೇನು ಮಾಡಿದ್ದಾರೆ? ಸದನದಲ್ಲಿ ಮಾತನಾಡಲು ಬರಲಿ. ನಾವು ಉತ್ತರ ಕೊಡುತ್ತೇವೆ ಎಂದು ಅವರು ಸವಾಲು ಹಾಕಿದರು. ಇವರದು ಒಣ ಭಾಷಣ. ನಾವು ಕೌಶಲ್ಯ ವೃದ್ಧಿ, ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಸುಧಾರಣೆಗಳನ್ನು ತಂದಿದ್ದೇವೆ. ಇವರೇನಾದರೂ ಜನರು ಸ್ವಾವಲಂಬಿ ಆಗಲು ನೆರವಾಗಿದ್ದಾರಾ? ಏನಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದಾರಾ ಎಂದು ಕೇಳಿದರು. ಸುಳ್ಳು ಹೇಳುತ್ತ, ಕೆಲಸ ಮಾಡದೆ ಇದ್ದವರು ಕಾಂಗ್ರೆಸ್ ಪಕ್ಷದವರು ಎಂದು ಆರೋಪಿಸಿದರು.
ಶೋಕದ ಯಾತ್ರೆ:
ಶಾಸಕ ಪಿ.ರಾಜೀವ್ ಅವರು ಮಾತನಾಡಿ, ರಾಜ್ಯ ಮತ್ತು ದೇಶವನ್ನು ಸುಮಾರು 60 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷವು ಇವತ್ತು ಪ್ರಜಾಧ್ವನಿ ಯಾತ್ರೆ ಕೈಗೊಂಡಿದೆ. ಅದು ಕಾಂಗ್ರೆಸ್ ಪಕ್ಷ ಮಾಡಿದ ದ್ರೋಹಕ್ಕೆ ಶೋಕದ ಯಾತ್ರೆ. ದೇಶಕ್ಕೆ ಮಾಡಿದ ಅಕ್ಷಮ್ಯ ಅಪರಾಧಕ್ಕಾಗಿ ಇದು ಪ್ರಜಾದ್ರೋಹ ಯಾತ್ರೆ ಎಂದು ಜನತೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಜೆಗಳ ಧ್ವನಿಯನ್ನು ಕಾಂಗ್ರೆಸ್ ಆಲಿಸಿದ್ದರೆ ಇವತ್ತು ಆ ಪಕ್ಷಕ್ಕೆ ಇಂಥ ದುರ್ಗತಿ ಬರುತ್ತಿರಲಿಲ್ಲ. ಕಾಂಗ್ರೆಸ್ನದು ಓಡುವ ಬಸ್ಸಲ್ಲ. ದೂಡುವ ಬಸ್ಸಾಗಿದೆ. ಒಬ್ಬರ ಕೈಯಲ್ಲೇ ಸ್ಟೇರಿಂಗ್ ಇರದ ಬಸ್ ಅದು. ಸಿದ್ದರಾಮಯ್ಯರ ಕೈಯಲ್ಲಿ ಸ್ಟೇರಿಂಗ್ ಇದ್ದರೆ ಡಿ.ಕೆ.ಶಿವಕುಮಾರ್ ಕಾಲಲ್ಲಿ ಬ್ರೇಕ್ ಇದೆ. ಕಾಂಗ್ರೆಸ್ ಪಕ್ಷ ಪ್ರಜೆಗಳ ಧ್ವನಿಯನ್ನು ಆಲಿಸಿದ್ದರೆ ಭಗತ್ ಸಿಂಗ್ ನೇಣಿಗೆ ಏರುವುದನ್ನು ತಪ್ಪಿಸಬಹುದಾಗಿತ್ತು ಎಂದರು.
ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು, ರಾಜೀನಾಮೆ ಕೊಟ್ಟು ಹೊರಬರಬೇಕಾಯಿತು. ಕಾಂಗ್ರೆಸ್ ಪ್ರಜೆಗಳ ಧ್ವನಿ ಆಲಿಸಿದ್ದರೆ ಭಾರತ ಇಬ್ಭಾಗ ಆಗುತ್ತಿರಲಿಲ್ಲ. ಪಾಕಿಸ್ತಾನದ ಸೃಷ್ಟಿ ಆಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ಜನರ ಧ್ವನಿಯನ್ನು ಆಲಿಸಿದ್ದರೆ ಚೀನಾಗೆ 40 ಸಾವಿರ ಚದರ ಕಿಮೀ ವಿಸ್ತೀರ್ಣವನ್ನು ಬಿಟ್ಟು ಕೊಡುತ್ತಿರಲಿಲ್ಲ. ಜನರ ಧ್ವನಿ ಆಲಿಸಿದ್ದರೆ ರಾಮಜನ್ಮಭೂಮಿಯಲ್ಲಿ ಯಾವತ್ತೋ ರಾಮ ಮಂದಿರ ನಿರ್ಮಾಣ ಆಗುತ್ತಿತ್ತು ಎಂದು ವಿಶ್ಲೇಷಿಸಿದರು.
ದೇಶದ ಜನರ ಧ್ವನಿ ಆಲಿಸಿದ್ದರೆ 370ನೇ ಪರಿಚ್ಛೇದ ಯಾವತ್ತೋ ರದ್ದಾಗುತ್ತಿತ್ತು. ಕಾಶ್ಮೀರ ಈ ಭಾರತದ ಮುಕುಟವಾಗಿ ಆಗಲೇ ಮಿಂಚಲು ಸಾಧ್ಯ ಆಗುತ್ತಿತ್ತು. ದಲಿತರ ಮೀಸಲಾತಿ ಯಾವತ್ತೋ ಹೆಚ್ಚಾಗುತ್ತಿತ್ತು. ದಲಿತರ ಮೂಗಿಗೆ ತುಪ್ಪ ಹಚ್ಚಿ ದಶಕಗಳ ವರೆಗೆ ದೇಶವನ್ನು ದುರ್ಗತಿಗೆ ತರುವುದು ತಪ್ಪುತ್ತಿತ್ತು. ದಲಿತರಿಗೆ ಯಾವತ್ತೋ ಉಚಿತ ಕರೆಂಟ್ ಕೊಡಬಹುದಿತ್ತು. ಉಚಿತ ವಿದ್ಯುತ್ ಕೊಡಲು ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರಕಾರ ಬರಬೇಕಾಯಿತು ಎಂದು ವಿವರಿಸಿದರು.
ಹಳ್ಳಿಯ ಮಕ್ಕಳು ಶಿಕ್ಷಣ ವಂಚಿತರಾಗಿದ್ದರು. ಸೈಕಲ್ ಕೊಡಲು ಯಡಿಯೂರಪ್ಪ ಬರಬೇಕಾಯಿತು. ದೇಶದ ಹಸಿವನ್ನು ನೀಗಿಸಿದ ರೈತ ಉಪವಾಸ ಇರುತ್ತಿರಲಿಲ್ಲ. ಪ್ರಜಾ ಧ್ವನಿ ಆಲಿಸಿದ್ದರೆ ರೈತರಿಗೆ, ಕೃಷಿಕರಿಗೆ ಯಾವತ್ತೋ ಸನ್ಮಾನ ಸಿಗುತ್ತಿತ್ತು. ಆದರೆ, ಅವತ್ತು ಪ್ರಜೆಗಳ ಧ್ವನಿ ಆಲಿಸಲಿಲ್ಲ. ನರೇಂದ್ರ ಮೋದಿಯವರು ಕೃಷಿಕರಿಗೆ ಸನ್ಮಾನ ಮಾಡುವ ಕೃಷಿ ಸಮ್ಮಾನ್ ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.