ಮುಳಬಾಗಿಲು ನಾಗೇಶ್, ವೈ.ಎಸ್.ವಿ ದತ್ತ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು: ಮಾಜಿ ಸಚಿವ ಮುಳಬಾಗಿಲು ನಾಗೇಶ್, ಜೆಡಿಎಸ್ ಮುಖಂಡ, ಮಾಜಿ ಎಂಎಲ್ಸಿ ವೈ.ಎಸ್.ವಿ ದತ್ತ, ಮೈಸೂರಿನ ಬಿಜೆಪಿ ಮುಖಂಡ, ಮೂಡ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅವರು ತಮ್ಮ ಬೆಂಬಲಿಗರ ಜತೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು.
ಸಿದ್ದರಾಮಯ್ಯ ಅವರ ಮಾತುಗಳು:
ಇಂದು ವೈಎಸ್ ವಿ ದತ್ತಾ, ನಾಗೇಶ್, ಮೋಹನ್ ಕುಮಾರ್ ಹಾಗೂ ದಯಾನಂದ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿಕೊಳ್ಳಲಾಗಿದೆ. ನಾನು ಕೂಡ ಅವರಿಗೆ ಪಕ್ಷಕ್ಕೆ ಹಾರ್ದಿಕ ಸ್ವಾಗತ ಬಯಸುತ್ತೇನೆ.
ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಅತಿ ಹೆಚ್ಚು ಕಾಲ ಇರುವ ಪಕ್ಷ. ಸುಮಾರು 137 ವರ್ಷಗಳ ಸಂಸ್ಥಾಪನಾ ದಿನ ಆಚರಿಸಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ.
ಬೇರೆ ಪಕ್ಷಗಳು ಸ್ವಾತಂತ್ರ್ಯ ಬಂದ ನಂತರ ಹುಟ್ಟಿಕೊಂಡ ಪಕ್ಷ. ಆರ್ ಎಸ್ ಎಸ್ ಹುಟ್ಟಿದ್ದು 1925ರಲ್ಲಿ, ಜನ ಸಂಘ ಹುಟ್ಟಿದ್ದು 1951ರಲ್ಲಿ, ಜೆಡಿಎಸ್ ಹುಟ್ಟಿದ್ದು 1999ರಲ್ಲಿ. ಜನತಾ ಪಾರ್ಟಿ 1977ರಲ್ಲಿ ರಚನೆ ಆಯಿತು. ನಾನು ದತ್ತಾ ಅವರು ಜನತಾ ಪಕ್ಷದಲ್ಲಿ ಇದ್ದೆವು. ನಂತರ ಪಕ್ಷ ಭಾಗ ಆಗಿ 1999ರಲ್ಲಿ ಜೆಡಿಯು ಹಾಗೂ ಜೆಡಿಎಸ್ ಆಗಿ ವಿ ಆಯಿತು. ದತ್ತಾ ಜೆಡಿಎಸ್ ನಲ್ಲಿ ಶಾಸಕರಾಗಿದ್ದರು, ಬಹಳ ಪ್ರತಿಭಾವಂತ ವ್ಯಕ್ತಿ. ದೇಶ ಹಾಗೂ ರಾಜ್ಯದ ರಾಜಕಾರಣವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವವರು. ಎಲ್ಲಾ ಸಿದ್ಧಾಂತ ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಕಮ್ಯುನಿಷ್ಟ್ ಸಿದ್ಧಾಂತ ಅರ್ಥ ಮಾಡಿಕೊಂಡಿದ್ದಾರೆ. ಜೆಡಿಎಸ್ ಗೆ ಯಾವುದೇ ಸಿದ್ಧಾಂತ ಇಲ್ಲ. ಬಿಜೆಪಿಯದು ಕೋಮುವಾದ ಸಿದ್ಧಾಂತ. ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಸಮಾನತೆ ಮೇಲೆ ನಂಬಿಕೆ ಇರುವ ಪಕ್ಷ. ಜೆಡಿಎಸ್ ಗೆ ಯಾವುದೇ ಸಿದ್ಧಾಂತ ಇಲ್ಲ. ಬಿಜೆಪಿ ಗೆದ್ದರೆ ಬಿಜೆಪಿ ಜತೆಗೆ, ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಜತೆ ಬರುತ್ತಾರೆ. ಅವರು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲ್ಲ. ನಾವು ಇದ್ದಾಗಲೇ 2004ರಲ್ಲಿ 59 ಸೀಟು ಗೆದ್ದಿದ್ದರು. ಅದಾದ ಮೇಲೆ ಕಡಿಮೆ ಆಗುತ್ತಿದೆಯೇ ಹೊರತು ಹೆಚ್ಚಾಗುತ್ತಿಲ್ಲ. ಅವರು ಏನೇ ಹೇಳಿದರೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲ್ಲ.
ಈಗ ದತ್ತಾ ಅವರು ಬಹಳ ದೀರ್ಘ ಕಾಲ ಜನತಾ ಪಕ್ಷದಲ್ಲಿದ್ದು, ಈಗ ರಾಜ್ಯ ಹಾಗೂ ದೇಶದ ರಾಜಕಾರಣದ ದೃಷ್ಟಿಯಿಂದ, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟರಿಗೆ ನ್ಯಾಯ ನೀಡುವ ಪಕ್ಷ ಕಾಂಗ್ರೆಸ್ ಮಾತ್ರ. ಬಿಜೆಪಿ ಇಂದು ಕೋಮುವಾದ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇವತ್ತು ಅವಕಾಶ ವಂಚಿತ ಜನರಿಗೆ ಅಭದ್ರತೆ ಕಾಡುತ್ತಿದೆ. ಎಲ್ಲರೂ ಆತಂಕದಲ್ಲಿ ಜೀವನ ಮಾಡುವಂತಾಗಿದೆ. ಯಾರಾದರೂ ಬಿಜೆಪಿ ಸರ್ಕಾರ ಟೀಕೆ ಮಾಡಿದರೆ, ಅವರ ಮೇಲೆ ಮೊಕದ್ದಮೆ ಹಾಕಿ ಹೆದರಿಸುತ್ತಾರೆ. ಮಾಧ್ಯಮಗಳನ್ನು ಹೆದರಿಸುತ್ತಾರೆ. ಇವತ್ತು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ದತ್ತಾ ಅವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಅವರ ಸ್ನೇಹಿತರು ಹಿಂಬಾಲಕರು ಪಕ್ಷಕ್ಕೆ ಸೇರುತ್ತಿದ್ದಾರೆ. ಅವರ ಆಗಮನದಿಂದ ಕಡೂರು ಮಾತ್ರವಲ್ಲ ರಾಜ್ಯದಲ್ಲಿ ಪಕ್ಷಕ್ಕೆ ಶಕ್ತಿ ಹೆಚ್ಚಲಿದೆ ಎಂದು ಭಾವಿಸುತ್ತಾ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ.
ಇನ್ನು ನಾಗೇಶ್ ಅವರು ತಾಂತ್ರಿಕ ನಿರ್ದೇಶಕರಾಗಿದ್ದರು. ನಂತರ ಮುಳಬಾಗಿಲಿನಿಂದ ಗೆದ್ದು ಬಂದಿದ್ದರು. ನಂತರ ಬಿಜೆಪಿಗೆ ಹೋಗಿ ಮಂತ್ರಿ, ನಿಗಮ ಮಂಡಳಿ ಮುಖ್ಯಸ್ಥರಾಗಿದ್ದರು. ಈಗ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿದ್ದಾರೆ. ಅವರು ಹೇಳಿದಂತೆ ಅವರ ಪೂರ್ವಿಕರು ಕಾಂಗ್ರೆಸ್ ಸಿದ್ಧಾಂತ ಒಪ್ಪಿದ್ದರು. ಕಾಂಗ್ರೆಸ್ ಪಕ್ಷ ಮಾತ್ರ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ರಕ್ಷಣೆ ನೀಡಲು ಸಾಧ್ಯ. ಇದನ್ನು ಅರ್ಥ ಮಾಡಿಕೊಂಡು ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ.
ಅವರು ಮಹದೇವಪುರ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವರು. ಆ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿ ಇವರ ಆಗಮನದಿಂದ ಪಕ್ಷಕ್ಕೆ ಶಕ್ತಿ ಹೆಚ್ಚಲಿದೆ. ಅವರಿಗೆ ಸ್ವಾಗತ ಮಾಡುತ್ತೇನೆ.
ಮೋಹನ್ ಕುಮಾರ್ ಅವರು ನಮ್ಮ ಜತೆಯಲ್ಲಿದ್ದವರು. ಅವರು ಶ್ರೀನಿವಾಸ್ ಪ್ರಸಾದ್ ಅವರಿಗೆ ಸ್ನೇಹಿತರು. ಅವರ ಎಲ್ಲಾ ಚುನಾವಣೆಯಲ್ಲಿ ಹೆಚ್ಚಾಗಿ ಇವರು ಕೆಲಸ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ಹೊಸತಲ್ಲ. ಶ್ರೀನಿವಾಸ್ ಪ್ರಸಾದ್ ಅವರ ಜತೆ ಬಿಜೆಪಿ ಹೋಗಿದ್ದರು. ಈಗ ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ.
ದಯಾನಂದ ಅವರು ನಮ್ಮ ಜತೆ ಇದ್ದವರು. ಕೋಲಾರದ ಜೆಡಿಎಸ್ ಪಕ್ಷದಲ್ಲಿ ಇದ್ದರು. ಈಗ ಜೆಡಿಎಸ್ ತೊರೆದು ಬೇಷರತ್ತಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ಸೈದ್ಧಾಂತಿಕ ಆಲೋಚನೆ ಇರುವವರು ಅವರನ್ನು ನಾನು ಸ್ವಾಗತಿಸುತ್ತೇನೆ.
ಇವರ ಜತೆ ಆಗಮಿಸುತ್ತಿರುವ ಎಲ್ಲರನ್ನೂ ನಾನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ನೀವಲ್ಲರೂ ಸೇರಿ ಕೋಮುವಾದಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ರಾಜ್ಯದ ಹಿತದೃಷ್ಟಿಯಿಂದ ಅನಿವಾರ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ದುರಾಡಳಿತದಿಂದ ರಾಜ್ಯದಲ್ಲಿ ಅತಂತ್ರ:
ಸಂಕ್ರಮಣ, ರೈತರ ಬದುಕು ಶುಭಾರಂಭವಾಗುವ ಪವಿತ್ರ ದಿನ ನಾವೆಲ್ಲ ಪವಿತ್ರ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಸೇರಿದ್ದೇವೆ. ಬಿಜೆಪಿ ಸರಕಾರದ ದುರಾಡಳಿತದಿಂದ ರಾಜ್ಯದಲ್ಲಿ ಅತಂತ್ರ ಸ್ಥಿತಿ ಎದುರಾಗಿದೆ. ಆಡಳಿತ ಪಕ್ಷದ ಮೇಲೆ ಜನರ ವಿಶ್ವಾಸ ಕಡಿಮೆ ಆಗುತ್ತಿದೆ. ಬೇರೆ ಪಕ್ಷಗಳ ಅನೇಕ ನಾಯಕರು ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬಿಜೆಪಿಗೆ ಸರ್ಕಾರ ನಡೆಸಲು, ಜನರಿಗೆ ಉತ್ತಮ ಆಡಳಿತ ನೀಡಲು ಆಗುತ್ತಿಲ್ಲ. ಜನ ನಿತ್ಯ ನೋವು ಅನುಭವಿಸುತ್ತಿದ್ದಾರೆ ಎಂದು ಇಂದು ಅನೇಕ ನಾಯಕರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಬಿಜೆಪಿ ಸೇರಿದವರು, ಬಿಜೆಪಿಯಲ್ಲಿ ಇರುವ ಬಹಳ ನಾಯಕರು ಒಳಗೊಳಗೇ ಅನೇಕ ಚರ್ಚೆ ಮಾಡುತ್ತಿದ್ದು, ಆ ಬಗ್ಗೆ ನಾನು ಈಗ ಮಾತನಾಡುವುದಿಲ್ಲ.
ಇಂದು ಮೂವರು ಪ್ರಮುಖ ನಾಯಕರು ಕಾಂಗ್ರೆಸ್ ಸೇರಲು ಬಂದಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ನಾಯಕರಾಗಿದ್ದ ವೈಎಸ್ ವಿ ದತ್ತಾ ಅವರು, ಬಿಜೆಪಿ ಸಹ ಸದಸ್ಯರಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದ ಹಾಲಿ ಶಾಸಕ ನಾಗೇಶ್ ಕಾಂಗ್ರೆಸ್ ಪಕ್ಷದ ಸಹ ಸದಸ್ಯರಾಗಿ ವಿಧಾನಸಭೆಯಲ್ಲಿ ಸ್ಥಾನ ಪಡೆಯಲಿದ್ದಾರೆ. ಇವರಿಗೆ ಕಾಂಗ್ರೆಸ್ ಪಕ್ಷದ ಸಹ ಸದಸ್ಯತ್ವ ನೀಡುತ್ತಿದ್ದೇವೆ.
ಇನ್ನು ದತ್ತಾ ಅವರನ್ನು ಕಳೆದ 48 ವರ್ಷಗಳಿಂದ ನಾನು ಬಲ್ಲೆ. ದತ್ತಾ ಅವರು ಪಾಠ ಮಾಡುವಾಗ ನಾನು ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಬಾಲ್ಯದಿಂದ ನಾವು ಆತ್ಮೀಯರು. ಅನೇಕ ಸಂಘಟನೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ಕಡೂರು ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷದ ವಿವಿಧ ಹುದ್ದೆಗಳ ನಿರ್ವಹಣೆ ಮಾಡಿದ್ದಾರೆ. ಅವರು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಜನತಾದಳದಲ್ಲಿ ಭವಿಷ್ಯ ಇಲ್ಲ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ರಾಹುಲ್ ಗಾಂಧಿ ಅವರ ಶ್ರಮ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಗಮನದಲ್ಲಿ ಇಟ್ಟುಕೊಂಡು ನಮ್ಮ ಪಕ್ಷಕ್ಕೆ ಸೇರುತ್ತಿದ್ದು, ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ.
ಇವರಿಬ್ಬರ ಜತೆಯಲ್ಲಿ ಹಲವು ಪ್ರಮುಖ ನಾಯಕರು ಪಕ್ಷ ಸೇರುತ್ತಿದ್ದು, ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ.
ಇವರೆಲ್ಲರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮುನ್ನ ಪಕ್ಷದ ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಿದ್ದೇವೆ. ಪಕ್ಷ ತನ್ನ ನಾಯಕರು ಹಾಗೂ ಕಾರ್ಯಕರ್ತರನ್ನು ವಿಸ್ತರಿಸಿಕೊಳ್ಳುತ್ತಿದೆ.
ಇನ್ನು ಮೈಸೂರಿನ ಮೂಡಾ ಅಧ್ಯಕ್ಷರಾಗಿ ಕೆಲಸ ಮಾಡಿರುವ ಮೋಹನ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಯಾಗಿದ್ದರು. ಅವರು ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ.
ಕೋಲಾರ ಯುವ ಜನತಾದಳದ ಅಧ್ಯಕ್ಷರಾಗಿ ಕೆಲಸ ಮಾಡಿದ ದಯಾನಂದ್ ಅವರು ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಅವರನ್ನು ನಾನು ಸ್ವಾಗತಿಸುತ್ತೇನೆ.
ಇದು ಆರಂಭ. ಇನ್ನು ಮುಂದೆ ಪ್ರತಿವಾರ ಅಥವಾ ಮೂರು ದಿನಕ್ಕೆ ಒಂದೊಂದು ದಿನ ಪಕ್ಷ ಸೇರ್ಪಡೆ ಕಾರ್ಯಕ್ರಮ ಇಟ್ಟುಕೊಳ್ಳಲಾಗುವುದು.
ರಾಜ್ಯದಲ್ಲಿ ಕಾಂಗ್ರೆಸ್ ಪರ್ವ ಆರಂಭವಾಗಿದ್ದು, ರಾಜ್ಯದ ಜನ ಈಗಾಗಲೇ ತಮ್ಮ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ನಿರೀಕ್ಷೆಗೂ ಮೀರಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಸ್ವಂತ ಬಲದಿಂದ ಅಧಿಕಾರ ಪಡೆಯಲಿದೆ.
ನಾಗೇಶ್ ಅವರು ಹಾಲಿ ಶಾಸಕರು. ಬಿಜೆಪಿಯಲ್ಲಿ ಇದ್ದುಕೊಂಡು ಕಾಂಗ್ರೆಸ್ ಪಕ್ಷದ ಕಡೆ ನೋಡಿದ್ದಾರೆ ಎಂದರೆ ಅವರ ಅನುಭವ, ಲೆಕ್ಕಾಚಾರ ಕೆಲಸ ಮಾಡಿದೆ. ಇನ್ನು ದತ್ತಾ ಅವರಿಗೆ ಜನರ ನಾಡಿ ಮಿಡಿತ ಗೊತ್ತಿದೆ. ಅವರಿಗೆ ತಮ್ಮದೇ ಆದ ಅನುಭವವಿದೆ. ದಳದ ಪರಿಸ್ಥಿತಿ ಗೊತ್ತಿದೆ. ಈ ಎಲ್ಲ ನಾಯಕರು ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಬೇರೆ ನಾಯಕರ ಷರತ್ತು ಒಪ್ಪಿ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಯಾರು ಬೇಷರತ್ತಾಗಿ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಲು ಬಯಸುತ್ತಾರೆ ಅಂತಹವರನ್ನು ಮಾತ್ರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಪಕ್ಷ ಅವರ ಅರ್ಹತೆಗೆ ತಕ್ಕಂತೆ ಪಕ್ಷ ಅವರಿಗೆ ಸ್ಥಾನಮಾನ ನೀಡಲಿದೆ. ವ್ಯಕ್ತಿಗಿಂತ ನಮಗೆ ಪಕ್ಷ ಮುಖ್ಯ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ರೀತಿಯ ಲೆಕ್ಕಾಚಾರ ಮಾಡಿ ನಾವು ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ.
ಇಂದು 28 ಲೋಕಸಭಾ ಕ್ಷೇತ್ರದ ವೀಕ್ಷಕರ ಜತೆ ಸಭೆ ಮಾಡಿದ್ದೇವೆ.
ನಮಗೆ ಸಮಯದ ಅಭಾವವಿದೆ. ನಾಡಿದ್ದು ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ನಾ ನಾಯಕಿ ಸಮಾವೇಶ ನಡೆಯಲಿದೆ. ಇದು ಮಹಿಳೆಯರ ಸಮಾವೇಶ. ವೇದಿಕೆ ಮೇಲೆ ಮಹಿಳೆಯರಿಗೆ ಮಾತ್ರ ಅವಕಾಶ ನೀಡಿ ನಾವುಗಳು ವೇದಿಕೆ ಕೆಳಗೆ ಇರುತ್ತೇವೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶವಿದೆ. ನಂತರ ನಮ್ಮ ಪ್ರಜಾಧ್ವನಿ ಯಾತ್ರೆ ಆರಂಭವಾಗಲಿದೆ. ಕಾರ್ಯಕರ್ತರೇ ನಮ್ಮ ಆಧಾರಸ್ತಂಭ. ಕಾರ್ಯಕರ್ತರು ಇಲ್ಲದೆ ನಾವ್ಯಾರು ನಾಯಕರಿಲ್ಲ.