ಬೆಂಗಳೂರು: ತುಮಕೂರಿನಲ್ಲಿ ಇದೇ 20 ಮತ್ತು 21ರಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ನಡೆಯಲಿದೆ ಎಂದು ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆಶಯದಂತೆ ಕಾರ್ಯಕ್ರಮ ಏರ್ಪಡಿಸಿದ್ದು, ಆರ್ಟಿಪಿ ಕನ್ವೆನ್ಶನ್ ಸೆಂಟರ್, ಶೆಟ್ಟಿ ಹಳ್ಳಿ ರಿಂಗ್ ರೋಡ್ ತುಮಕೂರಿನಲ್ಲಿ ಕಾರ್ಯಕಾರಿಣಿ ನಡೆಯಲಿದೆ ಎಂದರು.
ಮಹಿಳೆಯರಿಗೆ ವಿಶೇಷ ಗೌರವ, ಘನತೆಯನ್ನು ಕರ್ನಾಟಕ ರಾಜ್ಯ ನೀಡಿದೆ. ಕಳೆದ 8 ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದ ಅನೇಕ ಸಾಧಕ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಜಿ ಅವರು ಪದ್ಮ ಪುರಸ್ಕಾರ ಸೇರಿ ವಿಶೇಷ ಗೌರವಗಳನ್ನು ನೀಡಿದ್ದಾರೆ. ತುಮಕೂರು ಜಿಲ್ಲೆಯ ಸೂಲಗಿತ್ತಿ ನರಸಮ್ಮ, ಸುಕ್ರಿ ಬೊಮ್ಮನಗೌಡ ಅವರಿಗೂ ಗೌರವ ಲಭಿಸಿದೆ. ಪರಿಸರಕ್ಕೆ ಕೊಡುಗೆ ನೀಡಿದ ಸಾಲುಮರದ ತಿಮ್ಮಕ್ಕ ಅವರನ್ನೂ ಗೌರವಿಸಲಾಗಿದೆ ಎಂದು ತಿಳಿಸಿದರು.
ಅನೇಕ ವಿಷಯಗಳ ಚಿಂತನ ಮಂಥನ ನಡೆಯಲಿದೆ. 37 ರಾಜ್ಯಗಳ ಮಹಿಳಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾದ ರಾಷ್ಟ್ರೀಯ ಪ್ರಭಾರಿ ದುಷ್ಯಂತಕುಮಾರ್ ಗೌತಂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಭಾಗವಹಿಸಲಿದ್ದಾರೆ. 20ರಂದು ಸಂಜೆ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ವಾನತಿ ಶ್ರೀನಿವಾಸನ್ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ನಡೆಯಲಿದೆ. ಸ್ಥಳೀಯ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. 21ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.
ಮೊದಲ ದಿನ ಬೆಳಿಗ್ಗೆ ತುಮಕೂರಿನ ಟೌನ್ಹಾಲ್ ಸರ್ಕಲ್ನಿಂದ ತುಮಕೂರು ಸಿದ್ಧಗಂಗಾ ಮಠದ ಆವರಣಕ್ಕೆ ಬೈಕ್ ರ್ಯಾಲಿ ನಡೆಯಲಿದೆ. ಪರಿಸರ ಸ್ನೇಹಿ ಮತ್ತು ಸ್ಥಳೀಯ ಉಡುಗೆ ತೊಡುಗೆಗಳಿಗೆ, ಆಹಾರಕ್ಕೆ ಆದ್ಯತೆ ಕೊಡಲಾಗುತ್ತಿದೆ ಎಂದು ತಿಳಿಸಿದರು. ‘ನಾ ನಾಯಕಿ’ ಎಂದು ಘೋಷಿಸಿದ ಪ್ರಿಯಾಂಕ ಗಾಂಧಿ ಅವರು ಚುನಾವಣೆ ಬಳಿಕ ನಾ ನಾಪತ್ತೆ ಆಗಲಿದ್ದಾರೆ ಎಂದು ಆರೋಪಿಸಿದರು.
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ ಅವರು ಮಾತನಾಡಿ, ಇದಲ್ಲದೆ ರಾಜ್ಯ ಮಹಿಳಾ ಸಮಾವೇಶವು ಇದೇ 28 ಅಥವಾ 29ರಂದು ನಡೆಯಲಿದೆ. ‘ನಾ ನಾಯಕಿ’ ಎನ್ನುವವರು ವರ್ಷಗಳಿಂದ ಬೇರೆಯವರಿಗೆ ಅವಕಾಶವನ್ನೇ ಕೊಟ್ಟಿಲ್ಲ. ಕಾಂಗ್ರೆಸ್ನವರು ಸುಳ್ಳು – ಅವೈಜ್ಞಾನಿಕ ಭರವಸೆ ಕೊಡುತ್ತಿದ್ದಾರೆ. ಅಂಥ ಭರವಸೆಗಳನ್ನು ನಾವು ನೀಡುವುದಿಲ್ಲ ಎಂದರು.
ಛತ್ತೀಸಗಡದಲ್ಲಿ 4 ವರ್ಷಗಳ ಹಿಂದೆ ಚುನಾವಣೆ ನಡೆದಿತ್ತು. ನಿರುದ್ಯೋಗ ಯುವತಿಯರಿಗೆ 2,500 ರೂಪಾಯಿ ಭತ್ಯೆ, ರೂ. 1000 ವಿಧವಾ
ಪಿಂಚಣಿ ಕೊಡುವ ಭರವಸೆ ಕೊಟ್ಟಿದ್ದರೂ ಅವು ಈಡೇರಿಲ್ಲ. ಹಿಮಾಚಲ ಪ್ರದೇಶ ಇಂಥದ್ದೇ ಭರವಸೆ ನೀಡಿದ್ದು, ಅದು ಜಾರಿಯಾಗಿಲ್ಲ. ರಾಜಸ್ಥಾನದಲ್ಲಿ ಮಹಿಳೆಯರಿಗೆ ಸಂಬಂಧಿಸಿ ವಿವಿಧ ಭರವಸೆ ಕೊಟ್ಟಿದ್ದರು. ಪ್ರಿಯಾಂಕ ಗಾಂಧಿ ಘೋಷಣೆಗಳು ಕೇವಲ ಘೋಷಣೆಯಾಗಿ ಉಳಿದಿವೆ ಎಂದು ಟೀಕಿಸಿದರು.
ಎಲ್ಲ ಗೃಹಿಣಿಯರಿಗೆ 2 ಸಾವಿರ ರೂಪಾಯಿ ಕೊಡಲು ಸಾಧ್ಯವೇ? ಎಂದು ಕೇಳಿದ ಅವರು ಇದು ಓಲೈಕೆ ರಾಜಕಾರಣ. ಕರ್ನಾಟಕದ ಪ್ರಜ್ಞಾವಂತ ಮಹಿಳೆಯರು ಇವರ ಮಾತಿಗೆ ಮರುಳಾಗುವುದಿಲ್ಲ ಎಂದು ತಿಳಿಸಿದರು. ನಾವು ಕೇವಲ ಘೋಷಣೆ ಮಾಡುವುದಿಲ್ಲ. ಅವುಗಳನ್ನು ಜಾರಿಗೆ ತಂದಿವೆ ಎಂದು ತಿಳಿಸಿದರು.
ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಎಲ್.ದೀಪಿಕಾ ಅವರು ಉಪಸ್ಥಿತರಿದ್ದರು.