ಸುದ್ದಿಮೂಲ ವಾರ್ತೆ ರಾಯಚೂರು, ಫೆ.11:
ಗಡಿನಾಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ಕಳೆದ 50 ವರ್ಷಗಳಿಂದಲೂ ರಾಜ್ಯ ಸರ್ಕಾರದ ಗಮನ ಸೆಳೆದರೂ ಸ್ಪಂದಿಸುತ್ತಿಲ್ಲ ಹೀಗಾಗಿ, ನಾವು ಕನ್ನಡಿಗರೂ ಅಲ್ಲ, ತೆಲುಗಿನವರೂ ಆಗದೆ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದೇವೆ ಎಂದು ಕೃಷ್ಣಾ ಗಡಿನಾಡು ಕನ್ನಡಿಗರ ಹೋರಾಟಗಾರ ಅಮರ ದೀಕ್ಷಿತ್ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಗಡಿನಾಡು ಕನ್ನಡಿಗರ ಸಮಸ್ಯೆಗಳು ಮತ್ತು ಪರಿಹಾರಗಳು ಕುರಿತ ವಿಚಾರಣ ಸಂಕಿರಣದಲ್ಲಿ ಮಾತನಾಡಿದರು. ತೆಲಂಗಾಣ ರಾಜ್ಯದ ಕೃಷ್ಣಾ ಮಂಡಲದ 13 ಹಳ್ಳಿಗಳು ಅಪ್ಪಟ ಕನ್ನಡ ಪ್ರದೇಶಗಳಾಗಿವೆ. ಇಲ್ಲಿ 1500 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಅವರ ಮುಂದಿನ ವಿದ್ಯಾಭ್ಯಾಸಕ್ಕೆ ರಾಯಚೂರು ಹಾಗೂ ಕರ್ನಾಟಕದಲ್ಲಿ ಪ್ರವೇಶ ಸಿಗುತ್ತಿಲ್ಲ ನಾವು ಎರಡೂ ರಾಜ್ಯಕ್ಕೂ ಸಲ್ಲದವರಾಗಿದ್ದೇವೆ ಎಂದು ಸಂಕಷ್ಟ ವಿವರಿಸಿದರು.
ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ನೇರ ಪ್ರವೇಶ ಹಾಗೂ ಶೇಕಡಾ 5ರಷ್ಟು ಮೀಸಲಾತಿ ಕೊಡಬೇಕೆಂಬ ಬೇಡಿಕೆಗೆ ಸ್ಪಂದಿಸಿದರೆ ಅನುಕೂಲ ಆಗಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಯಂಕಣ್ಣ ಗಡಿನಾಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳು ಆಲಿಸಿ, ಸ್ಪಂದಿಸುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಡಾ. ಜೆ.ಎಲ್.ಈರಣ್ಣ, ಡಾ. ಶಿವಯ್ಯ ಹಿರೇಮಠ, ಗಡಿನಾಡು ಕನ್ನಡಿಗರ ಸಂಘದ ಅಧ್ಯಕ್ಷ ನಿಜಾಮುದ್ದೀನ್, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಬಶೀರ ಅಹ್ಮದ ಹೊಸಮನಿ ಮಾತನಾಡಿದರು.
ವೇದಿಕೆಯ ಮೇಲೆ ಕೋಶಾಧ್ಯಕ್ಷ ಹನುಮಂತ ಆಲೂರು, ಉಪನ್ಯಾಸಕ ಡಾ. ಹನುಮಂತ ಸ್ವಾಗತಿಸಿದರು, ಗೌರವಾಧ್ಯಕ್ಷ ಎಚ್.ಎಚ್.ಮ್ಯಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು, ಸಾಹಿತಿಗಳಿದ್ದರು.