ಸುದ್ದಿಮೂಲ ವಾರ್ತೆ ಕಲಬುರಗಿ, ಫೆ. 15:
ಹಿಂದುಳಿದ ಸಮುದಾಯದ ಜನರನ್ನು ಅಜ್ಞಾನದಿಂದ ಸುಜ್ಞಾನದಡೆಗೆ ತಂದ ಕೀರ್ತಿ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರಿಗೆ ಸಲ್ಲುತ್ತದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಹೇಳಿದರು.
ನಗರದ ರಂಗಮಂದಿರದಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತಿ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಿ ಮಾತನಾಡಿದರು. ಇಡೀ ಭಾರತದಲ್ಲಿ ಇಂದು ಸಂತ ಸೇವಾಲಾಲ್ ಜಯಂತಿ ಆಚರಣೆ ಮಾಡಲಾಗುತ್ತಿದೆ. ದೆಹಲಿಯಲ್ಲಿ ಸಂತ ಶ್ರೀ ಸೇವಲಾಲ್ ಮಹಾರಾಜರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಬಂಜಾರ ಸಮಾಜದ ಏಳಿಗೆಗಾಗಿ ನಾಲ್ಕೈದು ಅಂಶಗಳ ಕುರಿತು ನರೇಂದ್ರ ಮೋದಿ ಅವರ ಬಳಿ ಮನವಿಯನ್ನು ಮಾಡಿದ್ದೇವೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಸಮುದಾಯದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೆ ಎಂದು ತಿಳಿಸಿದರು.
ನಮ್ಮ ಬಿಜೆಪಿ ಸರಕಾರ ಹೈದ್ರಬಾದ್ನಲ್ಲಿ ಬೃಹತ್ ಬಂಜಾರ ಭವನವನ್ನು ನಿರ್ಮಿಸಿ, ಅಲ್ಲಿ ಸಹ ಸಮುದಾಯವನ್ನು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರು ಸಮುದಾಯಕ್ಕಾಗಿ ಅನೇಕ ಸೌಲಭ್ಯ ಒದಗಿಸಿದ್ದಾರೆ. ಬಂಜಾರ ಸಮುದಾಯದ ಏಳಿಗೆಗಾಗಿ ಹೆಚ್ಚಿನ ಅನುದಾನ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಸಂತ ಸೇವಾಲಾಲ್ ಮಹಾರಾಜ ಶಕ್ತಿಪೀಠದ ಶ್ರೀ ಬಳಿರಾಮ ಮಹಾರಾಜ ಅವರು ಆಶೀರ್ವಚನ ನೀಡಿ, ಸಂತ ಸೇವಾಲಾಲ್ ಮಹಾರಾಜ್ ಜಯಂತಿಯನ್ನು ಇಡೀ ದೇಶದಲ್ಲಿ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಯಾರು ಕಿರಿಯರಲ್ಲ ಯಾರು ದೊಡ್ಡವರಲ್ಲ. ಯಾರನ್ನು ಕೀಳಿರಿಮೆಯಿಂದ ನೋಡಬಾರದು. ಎಲ್ಲರೂ ಶಿಕ್ಷಿತರಾಗಬೇಕು. ಯಾರ ಮೇಲೂ ದಬ್ಬಾಳಿಕೆ ಮಾಡಬಾರದು ಅದು ಸ್ವಾತಂತ್ರ್ಯದ ಲಕ್ಷಣವಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕಿ ಜಗದೀಶ್ವರಿ, ಜಿಲ್ಲಾಧಿಕಾರಿ ಕಚೇರಿಯ ತಹಸಿಲ್ದಾರ್ ನಿಸಾರ್ ಅಹ್ಮದ್, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಬಂಜಾರ ಸಮುದಾಯದ ಮುಖಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.