ಸುದ್ದಿಮೂಲ ವಾರ್ತೆ ರಾಯಚೂರು, ಫೆ.15:
ಕರ್ನಾಟಕ ರಾಜ್ಯ ಭೋವಿ (ವಡ್ಡರ) ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ಖಜಾಂಚಿ ಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ ಸಂಘ ವಿಸರ್ಜಿಸಲು ಸಹಕಾರ ಸಂಘಕ್ಕೆ ದೂರು ಸಲ್ಲಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಕಾಶಿನಾಥ ಹಾಗೂ ಸದಸ್ಯ ಸತ್ಯಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಹನುಮಂತು ರಾಮನಗರ ಹಾಗೂ ಖಜಾಂಚಿ ಸಿ.ಬಿ.ವೀರೇಶ ಎನ್ನುವವರು ಶ್ರೀ ಸಿದ್ದರಾಮೇಶ್ವರ ಜಯಂತಿ ಹೆಸರಲ್ಲಿ ಸಮುದಾಯದವರಲ್ಲಿ ಸುಮಾರು 3 ಲಕ್ಷ ರೂ.ಗಳವರೆಗೆ ಸಂಘದ ಸಭೆಯಲ್ಲಿ ತೀರ್ಮಾನಿಸದೆ ಏಕಪಕ್ಷೀಯವಾಗಿ ದೇಣಿಗೆ ರೂಪದಲ್ಲಿ ಹಣ ಸ್ವೀಕರಿಸಿ ಲೆಕ್ಕ ಪತ್ರವನ್ನೇ ನೀಡಿಲ್ಲ. ಪಡೆದ ಹಣಕ್ಕೆ ರಸೀದಿ ಇಲ್ಲ. ಖಾತೆಗೂ ಜಮಾ ಮಾಡಿಲ್ಲ. ಅಲ್ಲದೆ, ಸರ್ಕಾರವೇ ಆಚರಿಸುವ ಜಯಂತಿಗೆ ಹಣ ಸಂಗ್ರಹಿಸಿದ್ದು ಸಂಘದ ಎಲ್ಲ ಪದಾಧಿಕಾರಿಗಳ ವಿರೋಧವಿದೆ ಎಂದರು.
ಈ ಹಿನ್ನೆಲೆಯಲ್ಲಿ ಅಧ್ಯಕ್ಷ, ಖಜಾಂಚಿಯವರ ನಡೆ ಸಹಕಾರ ಸಂಘದ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಆ ಇಬ್ಬರ ವಿರುದ್ಧ ದೂರಿನ ಜೊತೆಗೆ ಸಂಘ ವಿಸರ್ಜನೆ ಮಾಡಲು ಉಳಿದೆಲ್ಲ ಪದಾಧಿಕಾರಿಗಳು ಸಹಿ ಮಾಡಿ ಉಪನಿಬಂಧಕರಿಗೆ ದೂರು ಸಲ್ಲಿಸಿದ್ದು, ವಿಚಾರಣೆಗೆ 90 ದಿನಗಳ ಅವಧಿಯೊಳಗೆ ಹಾಜರಿಯಾಗಿ ಸಮರ್ಪಕ ದಾಖಲೆ, ಉತ್ತರ ನೀಡಲು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ತಿಮ್ಮಪ್ಪ, ಸದಸ್ಯ ಮಾರೆಪ್ಪ ಇತರರಿದ್ದರು.