ಸುದ್ದಿಮೂಲ ವಾರ್ತೆ ರಾಯಚೂರು, ಫೆ.15:
ದೇವದಾಸಿ ವಿಮುಕ್ತ ಮಹಿಳೆಯರ ಮಾಸಾಶನ 5 ಸಾವಿರಕ್ಕೆ ಹೆಚ್ಚಿಸಬೇಕು, ಮರು ಸಮೀಕ್ಷೆಗೆ ಮುಂದಾಗಲು ಸೇರಿ ವಿವಿಧ ಬೇಡಿಕೆ ಈಡೇರಿಸಲು ದೇವದಾಸಿ ವಿಮುಕ್ತ ಮಹಿಳೆಯರ ಹೋರಾಟ ಸಮಿತಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.
ಇಂದು ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸಂಘದ ನೇತೃತ್ವದಲ್ಲಿ ದೇವದಾಸಿ ಪದ್ದತಿ ವಿಮುಕ್ತ ಮಹಿಳೆಯರು ಧರಣಿ ಆರಂಭಿಸಿದರು. ಮುಂಬರುವ ಬಜೆಟ್ನಲ್ಲಿ ಮಹಿಳೆಯರಿಗೆ ಮಾಸಿಕ 5 ಸಾವಿರಕ್ಕೆ ಹೆಚ್ಚಿಸಬೇಕು, ಎಲ್ಲಾ ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯಧನ ಹೆಚ್ಚಿಸಬೇಕು, ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರ ಸೇರ್ಪಡೆ ಮಾಡಿ ನೆರವು ಒದಗಿಸಬೇಕು, ಅವರ ಮಕ್ಕಳು ಮದುವೆಯಾದಲ್ಲಿ 5 ಲಕ್ಷ ಪ್ರೋತ್ಸಾಹ ಧನ ಷರತ್ತಿಲ್ಲದೆ ವಿತರಿಸಬೇಕು, ದೇವದಾಸಿ ಮಹಿಳೆಯರು ಮತ್ತವರ ಮಕ್ಕಳಿಗೆ ತಲಾ 5 ಎಕರೆ ನೀರಾವರಿ ಜಮೀನು ಉಚಿತವಾಗಿ ಕೊಡಬೇಕು,ನಿವೇಶನ ರಹಿತರಿಗೆ ಸ್ಥಳ, ಉಚಿತ ಮನೆ ನಿರ್ಮಿಸಿಕೊಡಲು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ.
ಧರಣಿಯಲ್ಲಿ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಕೆ.ಜಿ.ವೀರೇಶ, ಹುಲಿಗೆಮ್ಮ ಮುದಗಲ್, ಮಹಾದೇವಿ ರಾಯಚೂರು, ಜಮುಲಮ್ಮ, ಹೊಸೂರಮ್ಮ ಸಿರವಾರ, ಕಮಲಮ್ಮ ಸಿರವಾರ, ಮುತ್ತಮ್ಮ ಲಿಂಗಸೂಗೂರು, ಪರಶುರಾಮ ಲಿಂಗಸೂಗೂರು, ರೇಣುಕಾ ಮಾನ್ವಿ, ಜೆ.ತಾಯಮ್ಮ ಸೇರಿ ಅನೇಕರು ಭಾಗವಹಿಸಿದ್ದಾರೆ.