ಕಲಬುರಗಿ,ಫೆ.18: ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಶಿವ ಭಕ್ತರು ಭಕ್ತಿ ಪೂರ್ವಕವಾಗಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದಿಂದ ಶಿವರಾತ್ರಿ ಆಚರಿಸಿದರು. ಇಡೀ ದಿನ ಜಿಲ್ಲೆಯ ಶಿವಮಂದಿರಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಬೆಳಗ್ಗೆ 9 ರಿಂದ ರಾತ್ರಿರವರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಿವನ ದರ್ಶನ ಪಡೆದರು. ಉಪವಾಸ ವೃತ ಆಚರಣೆ ಮಾಡಿ ಶಿವಧ್ಯಾನ ನಡೆಸಿದರು.
ಬೆಳಗಿನಿಂದ ಸೂರ್ಯಾಸ್ತದವರೆಗೂ ಉಪವಾಸ ಆಚರಣೆ ಮಾಡಿ ಸಾಯಂಕಾಲ ಮತ್ತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ದರ್ಶನ ಪಡೆದು ಹಣ್ಣು ಹಂಪಲು ಸೇವಿಸಿ ಉಪವಾಸ ಕೊನೆಗೊಳಿಸಿದರು. ಸಾಯಂಕಾಲ ನಡೆದ ವಿಶೇಷ ಪೂಜೆಯಲ್ಲೂ ಅನೇಕರು ಭಾಗವಹಿಸಿ, ರಾತ್ರಿ ಜಾಗರಣೆ, ಭಜನೆಗಳಲ್ಲಿ ನೂರಾರು ಜನರು ಭಾಗವಹಿಸಿ ಭಕ್ತಿ ಮೆರೆದರು.
ಕಲಬುರಗಿ ನಗರದ ಆಳಂದ ರಸ್ತೆಯ ರಾಮತೀರ್ಥ ಮಂದಿರದಲ್ಲಿ ಶಿವಲಿಂಗಕ್ಕೆ ಬೆಳಗಿನಿಂದಲೇ ರುದ್ರಾಭಿಷೇಕ, ಪೂಜೆ ಆರತಿ, ಪುಪ್ಪಾಲಂಕಾರ ಹೀಗೆ ವಿವಿಧ ಬಗೆಯ ಪೂಜೆಗಳು ಸಲ್ಲಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಶಿವನ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡು, ದೇವಸ್ಥಾನದ ಆವರಣದಲ್ಲಿ ಅಲ್ಲಲ್ಲಿ ಹಣ್ಣು-ಹಂಪಲುಗಳ ಪ್ರಸಾದವನ್ನು ಸ್ವೀಕರಿಸಿದರು.
ಸೇಡಂ ರಸ್ತೆ ಬಳಿಯ ಗೀತಾ ನಗರದ ಬ್ರಹ್ಮಕುಮಾರಿ ಆಶ್ರಮದ ಅಮೃತ ಸರೋವರದಲ್ಲಿ ಪ್ರತಿ ಶಿವರಾತ್ರಿಯಂತೆ ಈ ವರ್ಷವೂ ವಿಭಿನ್ನವಾಗಿ ಶಿವರಾತ್ರಿ ಹಬ್ಬ ಆಚರಣೆ ಮಾಡಲಾಯಿತು. ಈ ಭಾಗದ ವಿಶೇಷ ಬೆಳೆ ಶೇಂಗಾ(ಕಡಲೆಕಾಯಿ)ಯಿಂದ 25 ಅಡಿ ಎತ್ತರದ ಬೃಹತ್ ಆಕಾರದ ಶಿವಲಿಂಗ ನಿರ್ಮಾಣ ಮಾಡಲಾಗಿತ್ತು. ಸುಮಾರು 8 ಕ್ವಿಂಟಾಲ್ ಕಡಲೆಕಾಯಿ ಬಳಸಿ ಶಿವಲಿಂಗ ತಯ್ಯಾರಿಸಿದ್ದು, ಬೆಳಗ್ಗೆ 9 ರಿಂದ ರಾತ್ರಿ ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿಗೆ ಭಕ್ತರ ದಂಡೆ ಆಗಮಿಸಿ ತಮ್ಮ ಭಕ್ತಿಯನ್ನು ಮೆರೆದರು.
ನಗರದ ರಾಮ ಮಂದಿರ, ಪಿ ಅಂಡ್ ಟಿ ಕಾಲೋನಿ, ಗೋದುತಾಯಿ ಕಾಲೋನಿ, ಶರಣಬಸವೇಶ್ವರ ದೇವಸ್ಥಾನ, ಓಂ ನಗರ ಗೇಟ್, ಹುಮನಾಬಾದ ರಿಂಗ್ ರಸ್ತೆ, ರೇವಣಸಿದ್ದೇಶ್ವರ ಕಾಲೋನಿ, ಬಿದ್ದಾಪುರ ಕಾಲೋನಿ ಸೇರಿ ಜೇವರ್ಗಿ, ಸೇಡಂ, ಚಿಂಚೋಳಿ, ಚಿತ್ತಾಪುರ ಹಾಗೂ ಆಳಂದ ತಾಲೂಕಿನಲ್ಲಿಯೂ ಶಿವನ ಆರಾಧನೆ ನಡೆಯಿತು.