(ಮುಖ್ಯ ವೇದಿಕೆ-ದಿ.ರಾಣಿ ರಂಗಮ್ಮ ರಾಜಾ ಅಂಬಣ್ಣ ನಾಯಕ)
(ಮಂಟಪ-ದಿ.ಡಾ.ವನಿತಾ ಪ್ರಭಾಕರ)
ಮಾನ್ವಿ ಫೆ-19
ಪಿ.ಪರಮೇಶ
ಮಹಿಳಾ ಸಮಾನತೆಗಿರುವ ತಡೆಗೋಡೆಗಳನ್ನು ಒಡೆದು ಮಹಿಳಾ ಸಮಾನತೆ ಸಾಧಿಸಲು ಇರುವ ಏಕೈಕ ಮಾರ್ಗವೆಂದರೆ ಅದು ಶಿಕ್ಷಣ ಎಂದು ಮಾನ್ವಿ ತಾಲೂಕಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಸಾಹಿತಿ, ಕವಯತ್ರಿ ಮಧುಕುಮಾರಿ ಪಾಂಡೆ ಹೇಳಿದರು.
ರವಿವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಾನ್ವಿ ತಾಲೂಕಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಿಕ್ಷಣ, ಅಕ್ಷರದ ಅರಿವು ಮಾತ್ರ ತಳ ಸಮುದಾಯಗಳಿಗೆ ಮತ್ತು ಮಹಿಳೆಯರಿಗೆ ಶೋಷಣೆಯಿಂದ ಹೊರ ಬರಲು ಸಹಾಯ ಮಾಡುತ್ತದೆ. 21 ನೇ ಶತಮಾನದ ಜಾಗತಿಕ ಯುಗದಲ್ಲೂ ಮಹಿಳೆಯನ್ನು ದ್ವಿತೀಯ ದರ್ಜೆ ಪ್ರಜೆಯಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ಅವಳು ಅಜ್ಞಾಧಾರಕಗಳಾಗಿ ಉಳಿದಿದ್ದಾಳೆ
ಸಮಾನತೆ ಎನ್ನುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ವಿದ್ಯೆ, ಉದ್ಯೋಗ, ಗಟ್ಟಿತನ ಸೃಜನಶೀಲತೆ, ಕ್ರಿಯಾಶೀಲತೆ ಎಲ್ಲವನ್ನೂ ದುಡಿಸಿಕೊಂಡು ಸಬಲರಾಗಿರುವ ಮಹಿಳೆಯನ್ನು ಸಮಾಜ ಎಷ್ಟಾದರೂ ನೀನು ಹೆಣ್ಣು ಎಂಬ ತುಚ್ಚ ದೃಷ್ಟಿಯಿಂದಲೇ ಕಾಣುತ್ತಿದೆ. ಏನೇ ಬಂದರೂ ಮಹಿಳೆಯರು ಮಾತ್ರ ತಮಗಿರುವ ಅಡೆತಡೆಗಳನ್ನು ಮೀರುವ ಪ್ರಾಮಾಣಿಕ ಪ್ರಯತ್ನದಲ್ಲಿದ್ದಾರೆ ಎನ್ನುವ ಅಂಶ ಆಶಾದಾಯಕ ಸಂಗತಿಯಾಗಿದೆ.
ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಿತು ಎಂಬ ವಾಕ್ಯವನ್ನು ಸಾಬೀತು ಪಡಿಸಿದವರು ವೀರರಾಣಿ ಕಿತ್ತೂರು ಚೆನ್ನಮ್ಮ, ಪ್ರಿಯದರ್ಶಿನಿ ಇಂದಿರಾ ಗಾಂಧಿ, ಝಾನ್ಸಿ ರಾಣಿ, ಬೆಳವಡಿ ಮಲ್ಲಮ್ಮ, ಮದರ್ ತೆರೇಸಾ ಮುಂತಾದವರು.
ಇಂದು ಟಿವಿ ಮಾಧ್ಯಮಗಳಲ್ಲಿ ಮಹಿಳೆಯರ ನೈತಿಕತೆಯ ಕೊರತೆಯನ್ನು ಕಾಣುತ್ತಾ ಇದ್ದೇವೆ.
ದೂರದರ್ಶನ ಧಾರಾವಾಹಿಗಳಲ್ಲಿ ವೃತ್ತಿ ನೆಲೆಯ ಮತ್ಸರ, ಸೇಡುಗಳನ್ನು ಸ್ತ್ರೀ- ಪುರುಷ ವ್ಯತ್ಯಾಸವಿಲ್ಲದೆ ಮುಂದುವರಿಸಿಕೊಂಡು ಹೋಗುತ್ತಾ ಮಹಿಳಾ ಖಳ ನಾಯಕಿಯರನ್ನಾಗಿ ಮಾಡುವುದನ್ನು ಕಾಣುತ್ತಾ ಇದ್ದೇವೆ. ಮನೆ ಮಂದಿ ಕುಳಿತು ನೋಡುವ ಕಥಾವಸ್ತುಗಳೇ ಇಲ್ಲವಾಗುತ್ತಿವೆ. ಗಂಡು ಹೆಣ್ಣುಗಳ ಸಂಬಂಧಕ್ಕೆ ಕಡಿವಾಣ ಇಲ್ಲದೆ ಅತಿರೇಕಕ್ಕೆ ಹೋಗಿದೆ. ಮುಗ್ಧ ಬಾಲಕರ ಮನಸ್ಸಿನಲ್ಲಿ ಅವಧಿಗೆ ಮುನ್ನ ಕಾಮೋದ್ರೇಕ ಭಾವನೆ ಬೆಳೆಯುವಂತೆ ದೃಶ್ಯಗಳನ್ನು ಬಿತ್ತರಿಸಲಾಗುತ್ತಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ಕೊಡಬೇಕು. ಅಂದಾಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ :
ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಟ್ಟರೆ ಅವರು ತಮ್ಮಲ್ಲಿ ಏನೇನು ಸುಧಾರಣೆ ಮಾಡಿಕೊಳ್ಳಬೇಕೆಂದು ತಾವೇ ತಿಳಿದುಕೊಳ್ಳುತ್ತಾರೆ. ಜೊತೆಗೆ ತಮ್ಮ ಸಮಸ್ಯೆ ಸವಾಲುಗಳನ್ನು ತಾವೇ ಪರಿಹರಿಸಿಕೊಳ್ಳುವ ಶಕ್ತಿ ಪಡೆಯುತ್ತಾರೆ. ಮನಸ್ಸಿನಲ್ಲಿ ಆಗುವ ತಲ್ಲಣಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಹೆಣ್ಣು ಸಂಸಾರದ ಕಣ್ಣು. ಸ್ತ್ರೀ ಒಂದು ವ್ಯಕ್ತಿ ಮಾತ್ರವಲ್ಲ. ಅವಳು ಒಂದು ಶಕ್ತಿ. ಮಹಿಳೆ ಸಮಾಜದ ಕೀಲಿ ಕೈ ಇದ್ದಂತೆ. ಸ್ತ್ರೀಯರ ಘನತೆ ಗೌರವ ಸೌಲತ್ತು ವೃದ್ಧಿಸುವ ಸಲುವಾಗಿ ವಿಶ್ವಸಂಸ್ಥೆಯು 1975 ನೇ ವರ್ಷವನ್ನು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಿಸಿ ಮಾರ್ಚ್ ಎಂಟರಂದು ಮಹಿಳಾ ದಿನಾಚರಣೆ ಆಚರಿಸುತ್ತಾರೆ. ಹೆಣ್ಣಿನಿಂದಲೇ ಇಹವು, ಹೆಣ್ಣಿನಿಂದಲೇ ಪರವು. ಹೆಣ್ಣಿನಿಂದಲೇ ಸಕಲ ಸಂಪದವು ಎಂದು ಸರ್ವಜ್ಞ ಹೇಳಿದಂತೆ
ಹೆಣ್ಣನ್ನು ಗೌರವದಿಂದ ಕಾಣಬೇಕು. ಹೆಣ್ಣು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಲ್ಲಳು ಎಂಬುದಕ್ಕೆ ಹತ್ತು ಹಲವಾರುವಮಹನೀಯರು ನಮ್ಮ ಕಣ್ಣ ಮುಂದೆ ಇದ್ದಾರೆ ಎಂದು ಹೇಳಿದರು.
ಮಹಿಳೆ ಇಂದು ಗಂಡಿನಷ್ಟೇ ಸಮನಾಗಿ ಸಬಲೀಕರಣ ಹೊಂದಲು ಪ್ರಯತ್ನ ಪಡುತ್ತಿದ್ದಾಳೆ. ಇದಕ್ಕೆ ಪುರುಷರು ಸಹಾಯ, ಸಹಕಾರ ನೀಡಬೇಕು. ಅವಕಾಶ, ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಕ್ಕೆ ಹಲವಾರು ನಿದರ್ಶನಗಳು ಇವೆ. ಇವೆಲ್ಲವನ್ನೂ ಮನಗಂಡು ಮಹಿಳೆ ಇಂದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮುಂದೆ ಬರಬೇಕಾಗಿದೆ ಎಂದು ಸಲಹೆ ನೀಡಿದರು.
ಮಾನ್ವಿ ತಾಲೂಕು ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮಂತಿಕೆ ಹೊಂದಿದ್ದು ಅನೇಕ ಶರಣ, ಸಂತರು ಆಗಿ ಹೋಗಿದ್ದಾರೆ. ಅನೇಕ ಸಾಹಿತಿಗಳ, ಕವಿಗಳು, ಲೇಖಕರು ಇದ್ದಾರೆ. ಉದಯೋನ್ಮುಖ ಕವಿಗಳು ಇದ್ದಾರೆ. ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಇಂತವರಿಗೆ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.