ಸುದ್ದಿಮೂಲ ವಾರ್ತೆ ರಾಯಚೂರು, ಫೆ.19:
ರಾಯಚೂರು ನಗರದ ವಾರ್ಡ್ 27ರ ನೀರಬಾವಿ ಕುಂಟಾ ಬಡಾವಣೆಯ ಸ್ಲಂ ನಿವಾಸಿಗಳಿಗೆ ಶಾಸಕ ಡಾ.ಶಿವರಾಜ ಪಾಟೀಲ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಜೊತೆಯಾಗಿ ವಸತಿ ಹಕ್ಕುಪತ್ರ ವಿತರಿಸಿದರು.
ಇಂದು ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ಹಾಲಿ ಶಾಸಕ ಡಾ.ಶಿವರಾಜ ಪಾಟೀಲ, ಮಾಜಿ ಶಾಸಕ ಎ.ಪಾಪಾರೆಡ್ಡಿ ವಿತರಿಸಿದರು.
ನಂತರ ಮಾತನಾಡಿದ ಮಾಜಿ ಶಾಸಕ ಎ.ಪಾಪಾರೆಡ್ಡಿ ಕ್ಷೇತ್ರದ ಸ್ಲಂ ನಿವಾಸಿಗಳಿಗೆ ಹಲವು ವರ್ಷಗಳ ಹಿಂದೆ ತಾವು ನಗರಸಭೆ ಅಧ್ಯಕ್ಷರಾಗಿದ್ದಾಗ ಕೊಳಚೆ ಪ್ರದೇಶದಲ್ಲಿ ನಿವೇಶನ ಮಾಡಿ, ಮನೆ ನಿರ್ಮಾಣಕ್ಕೆ ಅವಕಾಶ ನೀಡಿದ್ದೆ. ಆದರೆ, ವಾಸ, ಮನೆಯ ಹಕ್ಕುಪತ್ರಗಳಿರದೆ ಸೌಲಭ್ಯಗಳಿಂದ ವಂಚಿತರಾಗಿದ್ದರು. ಶಾಸಕ ಶಿವರಾಜ ಪಾಟೀಲ ಯಾರೂ ಇದುವರೆಗೆ ಮಾಡದ ಮಹತ್ವದ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕ್ಷೇತ್ರದ ಅಭಿವೃದ್ದಿಗೆ ಅನುದಾನ ತಂದಿದ್ದು ಕೆಲಸ ಮಾಡುವವರಿಗೆ ಜನ ಬೆಂಬಲಿಸಿದರೆ ಮತ್ತಷ್ಟು ಹುಮ್ಮಸ್ಸು ಕೆಲಸ ಮಾಡಲು ಬರಲಿದೆ ಎಂದು ಪರೋಕ್ಷವಾಗಿ ಶಾಸಕರ ಪರ ವಹಿಸಿ ಮಾತನಾಡಿದರು.
ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಕೊಳಚೆ ಪ್ರದೇಶದಲ್ಲಿರುವ ಜನರಿಗೆ ಹಕ್ಕು ಪತ್ರ ದೊರೆತು ಅವರ ಆಸ್ತಿ ಹೆಸರಿಗೆ ಉಳಿಯಬೇಕು ಎಂಬ ಆಶಯದೊಂದಿಗೆ ಸರ್ಕಾರದ ಮೇಲೆ ಒತ್ತಡ ತಂದು ಈಗ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದರು.
ಕಳೆದ ಬಾರಿ 4 ಕಾಲಂ ಮನೆ ನಿರ್ಮಾಣಕ್ಕೆ ಅವಕಾಶ ಇತ್ತು ಈಗ 6 ಕಾಲಂ ಮನೆ ನಿರ್ಮಿಸಲು ಅವಕಾಶ ಕೊಟ್ಟಿದ್ದು ಕೊಂಚ ವೆಚ್ಚ ಭರಿಸಿದರೆ ನಿಮಗೊಂದು ವಿಶಾಲವಾದ ಸ್ಥಳಲ್ಲಿ ಮನೆ ದೊರೆಯಲು ಸರ್ಕಾರ ನೆರವು ನೀಡಿದೆ. ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡಿದರೆ ಮತ್ತಷ್ಟು ಅನುಕೂಲ ಆಗಲಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲು,ಸದಸ್ಯ ಪಿ.ಶ್ರೀನಿವಾಸರೆಡ್ಡಿ, ಆರ್ಡಿಎ ಮಾಜಿ ಅಧ್ಯಕ್ಷ ಗೋಪಾಲರೆಡ್ಡಿ, ಆಂಜನೇಯ್ಯ ಕಡಗೋಲು, ಎನ್.ಶ್ರೀನಿವಾಸರೆಡ್ಡಿ ಸೇರಿ ಅನೇಕ ಮುಖಂಡರು, ಬಡಾವಣೆ ನಿವಾಸಿಗಳಿದ್ದರು.