(ಮುಖ್ಯ ವೇದಿಕೆ-ದಿ.ರಾಣಿ ರಂಗಮ್ಮ ರಾಜಾ ಅಂಬಣ್ಣ ನಾಯಕ)
(ಮಂಟಪ-ದಿ.ಡಾ.ವನಿತಾ ಪ್ರಭಾಕರ)
ಪಿ.ಪರಮೇಶ ಮಾನ್ವಿ ಫೆ-19
ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕೆಂದು ಕಲಬುರ್ಗಿಯ ಗೋದುತಾಯಿ ಮಹಿಳಾ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ನೀಲಾಂಬಿಕಾ ಪಾಟೀಲ್ ಹೇಳಿದರು.
ರವಿವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಾನ್ವಿ ತಾಲೂಕಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳೆ ಗಂಡಿನಷ್ಟೇ ಸಮಾನಳು. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು. ಇಂದಿನ ದಿನಗಳಲ್ಲಿ ಮಹಿಳೆಗೆ ಸಿಕ್ಕ ಸ್ವಾತಂತ್ರ್ಯ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕಿಂತಲೂ ದೊಡ್ಡದು. ಇಂದಿನ ದಿನ ಹೆಣ್ಣು ಮಕ್ಕಳ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಇಂತಹ ಜವಾಬ್ದಾರಿಗಳನ್ನು ಮರೆತು ಮಹಿಳೆಯರು ಆಸೆ, ಆಕಾಂಕ್ಷೆಗಳಿಗೆ ಒಳಗಾಗಬಾರದು. ಮಹಿಳೆ ಇಂದು ಅನೇಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದು ಅಂತಹ ಸಮಸ್ಯೆಗಳಿಗೆ ಮಹಿಳೆಯರಾದ ನಾವೇ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳು ಪ್ರಮುಖ ರಂಗಗಳಲ್ಲಿ ಮುಂದೆ ಬರಬೇಕು. ಇತಿಹಾಸ ಪುಟ ತಿರುವಿ ನೋಡಿದಾಗ ಅನೇಕ ಮಹಿಳೆಯರು ಹೋರಾಟ ಮಾಡಿ ಯಶಸ್ಸು ಕಾಣುವುದರ ಮೂಲಕ ಚರಿತ್ರೆ ನಿರ್ಮಿಸಿದ್ದಾರೆ. ಅನೇಕ ಮಹಿಳೆಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೀವ ತೆತ್ತಿದ್ದಾರೆ. ಇವೆಲ್ಲವನ್ನೂ ಮನಗಂಡು ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ ಮುಂತಾದ ಅನ್ಯಾಯ-ಅಕ್ರಮಗಳ ವಿರುದ್ದ ಸಿಡಿದೇಳಬೇಕೆಂದು ಎಚ್ಚರಿಕೆಯ ಸಲಹೆಗಳನ್ನು ನೀಡಿದ ಡಾ.ನೀಲಾಂಬಿಕಾ ಪಾಟೀಲ್ ಇಂದು ಮಾನ್ವಿಯಲ್ಲಿ ನಡೆಯುತ್ತಿರುವ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿದೆ. ಇಂತಹ ಸಮ್ಮೇಳನ, ಸಮಾವೇಶಗಳನ್ನು ಮಾಡುವುದರಿಂದ ಮಹಿಳೆಯರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಮಹಿಳೆಯರು ಕೂಡಾ ಕನ್ನಡ ಭಾಷೆ, ನೆಲ, ಜಲ, ಕಲೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಬೇಕೆಂದು ಸಲಹೆ ನೀಡಿ ಮಹಿಳಾ ಸಮ್ಮೇಳನದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ರಾಜಾ ವೆಂಕಟಪ್ಪ ನಾಯಕ, ಸಮ್ಮೇಳನದ ಸರ್ವಾಧ್ಯಕ್ಷರಾದ ಮಧುಕುಮಾರಿ ಪಾಂಡೆ ಸಮ್ಮೇಳನ ಕುರಿತು ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸೈಂಟ್ ಮೇರಿಸ್ ಚರ್ಚಿನ ಫಾದರ್ ಜ್ಞಾನಪ್ರಕಾಶಂ ಅಶೀರ್ವಚನ ನೀಡಿದರು.
ಆರಂಭದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿಕುಮಾರ ಪಾಟೀಲ್ ವಕೀಲರು ಸ್ವಾಗತ ಭಾಷಣ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ರಕಲಾ ಪ್ರದರ್ಶನ ಮತ್ತು ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ಪೋತ್ನಾಳ್ ಜಾಗೃತಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಿನ್ನಮ್ಮ ಮುದ್ದಂಗುಡ್ಡಿ ನೆರವೇರಿಸಿದರು.
ಈ ಸಮಾರಂಭದಲ್ಲಿ ಸಮ್ಮೇಳನದ ನೆನಪಿನಾರ್ಥ ಸ್ಮರಣ ಸಂಚಿಕೆಯ ಮುಖಪುಟವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.
ಸಮ್ಮೇಳನಾಧ್ಯಕ್ಷರು ಹಾಗೂ ಸಾಹಿತಿಗಳಾದ ಮಧುಕುಮಾರಿ ಪಾಂಡೆ ಇವರ ಕೃತಿ ‘ಚಿಂತನಾ ಗಂಗಾ, ಲೇಖಕಿ ವೀರಮ್ಮ ಸೋಗಿ ಇವರ ಕವನ ಸಂಕಲನ ಪಯಣ ಹಾಗೂ ಸಾಹಿತಿ ಅಂಬಮ್ಮಪ್ರತಾಪಸಿಂಗ್ ಇವರ ಗಜಲ್ ಸಂಕಲನ ಮೌನದೊಡಲ ಮಾತು ಎಂಬ ಹೊಸ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕು.ಶಾಂತಾ ಬಲ್ಲಟಗಿ ಪ್ರಾರ್ಥನೆ ಹಾಡಿದರು. ದತ್ತಪ್ಪ ಶಿಕ್ಷಕ ಮತ್ತು ತಂಡದವರು ನಾಡಗೀತೆ ಹಾಡಿದರು. ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಜಂಗಮರಹಳ್ಳಿ ಸಮ್ಮೇಳನಾಧ್ಯಕ್ಷರ ಪರಿಚಯ ಭಾಷಣ ಮಾಡಿದರು. ವೀರಮ್ಮ ಸೋಗಿ ಮತ್ತು ಶೋಭಾ ನಿರೂಪಿಸಿದರೆ, ರಜನಿ ಶಾಮರಾವ್ ವಂದಿಸಿದರು.
ವೇದಿಕೆಯ ಮೇಲೆ ಪುರಸಭಾಧ್ಯಕ್ಷೆ ರಶೀದಾ ಬೇಗಂ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಪುರಸಭೆಯ ಹಿರಿಯ ಸದಸ್ಯ ರಾಜಾ ಮಹೇಂದ್ರ ನಾಯಕ, ಹಿರಿಯ ವಕೀಲರಾದ ಎ.ಬಿ.ಉಪ್ಪಳಮಠ, ರಾಜಾ ಶ್ಯಾಮಸುಂದರ ನಾಯಕ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು,
ಜಿಲ್ಲಾ ಕಸಾಪ ಪ್ರತಿನಿಧಿಗಳಾದ ರಮೇಶಬಾಬು ಯಾಳಗಿ, ಶರಣಬಸವ ನೀರಮಾನ್ವಿ, ಬಸವರಾಜ ಭೋಗಾವತಿ, ಡಾ.ಶಾಂತಾ ಕುಲಕರ್ಣಿ, ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಧೋಳ, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ್, ಪುರಸಭೆಯ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಿ ನಾಯಕ, ಮಹಿಳಾ ತಜ್ಞ ವೈದ್ಯೆ ಡಾ.ರೋಹಿಣಿ ಮಾನ್ವಿಕರ್, ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಸೈಯದ್ ಪಟೇಲ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಬಿ.ಸಿದ್ರಾಮಯ್ಯಸ್ವಾಮಿ, ಬಸವರಾಜ ಕನ್ನಾರಿ, ಕಸಾಪ ಗೌರವ ಕಾರ್ಯದರ್ಶಿ ಬಿಷ್ಟಪ್ಪ ಅಬ್ಬಿಗೇರಿ, ಗೌರವ ಕೋಶಾಧ್ಯಕ್ಷ ಮನ್ಸಾಲಿ ಯಂಕಯ್ಯಶೆಟ್ಟಿ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಅಧ್ಯಕ್ಷರಾದ ಅರುಣಾ ದೇವಿ, ಜಿ.ಲಕ್ಷ್ಮೀ ರಾಮಾಂಜನೇಯಶೆಟ್ಟಿ, ವಿಜಯಲಕ್ಷ್ಮಿ, ಜಾಹೇದಾ ಬೇಗಂ, ವಿಜಯ ಶ್ರೀಧರ, ಪರಿಮಳಾ ಬಾಯಿ, ಚನ್ನಮ್ಮ, ಸರೋಜಾ ವೀರೇಶ ಭಂಡಾರಿ ಹಾಗೂ ಮಾನ್ವಿ ತಾಲೂಕಿನ ವಿವಿಧ ಗ್ರಾ.ಪಂ.ಗಳ ಮಹಿಳಾ ಅಧ್ಯಕ್ಷರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಮುಂಚೆ ಬೆಳಿಗ್ಗೆ ವೇದಿಕೆಯ ಮುಂಭಾಗದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ರಾಷ್ಟ್ರಧ್ವಜಾರೋಹಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ನಾಡಧ್ವಜವನ್ನು ಹಾಗೂ ಕಸಾಪ ತಾಲೂಕಾಧ್ಯಕ್ಷ ರವಿಕುಮಾರ ಪಾಟೀಲ್ ಪರಿಷತ್ ಧ್ವಜಾರೋಹಣ ಮಾಡಿದರು.
ನಂತರ ಬಸವ ವೃತ್ತದಿಂ ವೇದಿಕೆಯವರೆಗೆ ನಾಡದೇವಿಯ ಭಾವಚಿತ್ರ ಮತ್ತು ಸಮ್ಮೇಳನದ ಸರ್ವಾಧ್ಯಕ್ಷರಾದ ಮಧುಕುಮಾರಿ ಪಾಂಡೆ ಇವರನ್ನು ಸಾರೋಟದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಸಮ್ಮೇಳನದ ಮುಖ್ಯದ್ವಾರಕ್ಕೆ ದಿ.ಜಡಿಯಮ್ಮ ನಾಡಗೌಡ ಹಾಗೂ ಮಹಾದ್ವಾರಕ್ಕೆ ದಿ.ಲಾಜವಂತಿ ಮಿಶ್ರಾ ಇವರುಗಳ ಹೆಸರನ್ನು ಇಡಲಾಗಿತ್ತು.