ಸುದ್ದಿಮೂಲವಾರ್ತೆ ಮಾನ್ವಿ ಫೆ-19
ಮಾನ್ವಿ ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶನಿವಾರ ಮುಕ್ತಾಗುಚ್ಛ ಬೃಹನ್ಮಠ ಕಲ್ಮಠ ವತಿಯಿಂದ ನಡೆದ ಗಾರಿಗೆ ಜಾತ್ರಾ ಮಹೋತ್ಸವ ರಥೋತ್ಸವಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಶ್ರೀಮಠವು ಮಹಿಳೆಯರಿಗೆ ರಥವನ್ನು ಎಳೆಯುವ ಅವಕಾಶ ನೀಡಿರುವುದು ಶ್ಲಾಘನೀಯ.
ಜಾತ್ರೆಗಳಲ್ಲಿ ಜೋಗತಿ ನೃತ್ಯ ಮಾಡುವ ನಮ್ಮಂತಹ ಜನಪದ ಕಲಾವಿದ ತೃತೀಯ ಲಿಂಗಿಗಳಿಂದ ರಥಕ್ಕೆ ಚಾಲನೆ ಕೊಡಿಸುವ ಮೂಲಕ ತೃತೀಯ ಲಿಂಗಿಗಳಲ್ಲಿ ಸಮಾಜದಲ್ಲಿ ಅತ್ಮ ಗೌರವದಿಂದ ಬದುಕುವ ಭರವಸೆಯನ್ನು ಶ್ರೀಗಳು ಕಲ್ಪಿಸಿದ್ದಾರೆ.
ನಮ್ಮ ಸುತ್ತಮುತ್ತಲಿನಲ್ಲಿ ಮನೆಗಳಲ್ಲಿ, ಶಾಲೆಗಳಲ್ಲಿ ತೃತೀಯ ಲಿಂಗಿಗಳನ್ನು ಗೌರವದಿಂದ ಕಾಣಿ ಹಾಗೂ ಇಂತವರಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಸರಕಾರ ನೀಡಿರುವ ಮೀಸಲಾತಿಯ ಲಾಭವನ್ನು ಪಡೆದು ಒಂದು ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ಕಲ್ಮಠ ಪರಂಪರೆಯ ಶ್ರೀಗಳು ರಥವನ್ನು ಮಹಿಳೆಯರಿಗೆ ಎಳೆಯುವುದಕ್ಕೆ ಅವಕಾಶವನ್ನು ನೀಡುವ ಮೂಲಕ ಸ್ತ್ರೀ ಸಮಾನತೆಯನ್ನು ಸಾರಿ ನಾಡಿನ ಇತರ ಮಠಗಳಿಗೆ ಅದರ್ಶವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಮಠದ ಶ್ರೀ ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳು , ಶ್ರೀ ವಿರೂಪಾಕ್ಷ ಪಂಡಿತಾರಾದ್ಯ ಶಿವಾಚಾರ್ಯಮಹಾಸ್ವಾಮಿಗಳು, ಮುಖಂಡರಾದ ರಾಜಾ ರಾಮಚಂದ್ರನಾಯಕ, ರಾಯಚೂರಿನ ಸೋಮವಾರ ಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು, ಮಂಗಳವಾರ ಪೇಟೆಯ ಶ್ರೀಗಳು, ,ನೀಲಗಲ್ ಸಂಸ್ಥಾನ ಬೃಹನ್ಮಠದ ಶ್ರೀ ರೇಣುಕಾ ಶಾಂತಮಲ್ಲ ಮಹಾಸ್ವಾಮಿಗಳು ಸೇರಿದಂತೆ ಇನ್ನಿತರರು ಇದ್ದರು.