ರೂಪಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ರೋಹಿಣಿ ಸಿಂಧೂರಿ
ಸುದ್ದಿಮೂಲ ವಾರ್ತೆ
ಬೆಂಗಳೂರು, ಫೆ.19: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಇತ್ತೀಚೆಗೆ ಮೈಸೂರಿನಲ್ಲಿ ಶಾಸಕ ಸಾ.ರಾ. ಮಹೇಶ್ ಅವರ ಜೊತೆ ಸಂಧಾನ ಸಭೆ ಮಾಡಿದ್ದರು. ಇದರ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ಮಧ್ಯೆ ಜಟಾಪಟಿ ಆರಂಭವಾಗಿದೆ. ರೋಹಿಣಿ ಅವರ ಕೆಲ ಖಾಸಗಿ ಫೋಟೊಗಳನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಾಕಿರುವ ಡಿ ರೂಪಾ, ಇಂತಹ ಫೋಟೊಗಳನ್ನು ರೋಹಿಣಿ ತಮ್ಮ ಮೇಲಾಧಿಕಾರಿಗಳಿಗೆ ಕಳುಹಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಫೋಟೊ ಬಿಡುಗಡೆ ಮಾಡಿರುವುದನ್ನು ರೂಪಾ ಅವರು ಸಮರ್ಥಿಸಿಕೊಂಡಿದ್ದರೆ, ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಇಬ್ಬರು ಸರ್ಕಾರಿ ಹಿರಿಯ ಅಧಿಕಾರಿಗಳ ಕಿತ್ತಾಟ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರೋಹಿಣಿ ಸಿಂಧೂರಿ ವಿರುದ್ಧ ಈ ಹಿಂದೆ 19 ಆರೋಗಳನ್ನು ಪಟ್ಟಿ ಮಾಡಿದ್ದ ಡಿ ರೂಪಾ ಅವರು, ರೋಹಿಣಿ ಸಿಂಧೂರಿ ತಮ್ಮ ಪುರುಷ ಮೇಲಾಧಿಕಾರಿಗಳಿಗೆ ಖಾಸಗಿ ಫೋಟೊಗಳನ್ನು ಕಳುಹಿಸುತ್ತಾರೆ ಎಂದು ಈ ಹಿಂದೆಯೇ ಆರೋಪ ಮಾಡಿದ್ದರು. ಅದಕ್ಕೆ ಪೂರಕವಾಗಿ ಡಿ ರೂಪಾ ಭಾನುವಾರ ತಮ್ಮ ಫೇಸ್ಬುಕ್ ಪೇಜ್ನಲ್ಲಿ ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
‘ಈ ರೀತಿಯ ಪಿಕ್ಚರ್ಸ್ normal ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪಿಕ್ಸ್ ಗಳ one to one ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಇದು ಆಕೆಯ private matter ಆಗುವುದಿಲ್ಲ ಐಎಎಸ್ SERVICE CONDUCT RULES ಪ್ರಕಾರ ಅಪರಾಧ. ಈ ಪಿಕ್ಸ್ ಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ investigate ಮಾಡಬಹುದು. ಸಲೂನ್ haircut chitra, ತಲೆದಿಂಬು ಇತ್ತು ಮಲಗಿ ತೆಗೆದಿರುವ ಚಿತ್ರ. Normal ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ speaks otherwise’ ಎಂದು ಡಿ. ರೂಪಾ ಫೇಸ್ಬುಕ್ನಲ್ಲಿ ಫೋಟೊಗಳ ಜೊತೆ ಬರೆದುಕೊಂಡಿದ್ದಾರೆ.
ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರೂಪಾ, ‘ರೋಹಿಣಿ ಸಿಂಧೂರಿ ಬಗ್ಗೆ ನಾನು ಈಗಾಗಲೇ 19 ಅಂಶಗಳನ್ನು ಉಲ್ಲೇಖ ಮಾಡಿದ್ದೇನೆ. ಅದರ ಬಗ್ಗೆ ಚರ್ಚೆಯಾಗಲಿ. ಅವರ ಕ್ಯಾರೆಕ್ಟರ್ ಹೇಗೆ ಎಂದು ಈಗಾಗಲೇ ಹೇಳಿದ್ದೇನೆ. ತಮ್ಮ ಖಾಸಗಿ ಫೋಟೊಗಳನ್ನು ಮೇಲಿನ ಅಧಿಕಾರಿಗಳಿಗೆ ಒನ್-ಟು-ಟನ್ ಕಳುಹಿಸುತ್ತಾರೆ ಎಂದರೆ ಏನರ್ಥ. ಕೆಲವರು ಹೇಳಬಹುದು ಇದು ಅವರ ಖಾಸಗಿ ಜೀವನ ಎಂದು. ಆದರೆ, ಮದುವೆ ಆದ ಮಹಿಳೆ ಸಾರ್ವಜನಿಕ ಜೀವನ ಹೇಗಿರಬೇಕು ಎಂಬ ನಿಯಮ ಇರುತ್ತೆ. ಅದನ್ನು ಮೀರಿ ಅವರು ನಡೆದುಕೊಂಡಿದ್ದಾರೆ. ಇದಕ್ಕೆ ರೋಹಿಣಿ ಸಿಂಧೂರಿ ಉತ್ತರ ನೀಡಬೇಕು. ಆದರೆ, ನಾನೇನು ಅವರಿಂದ ಉತ್ತರ ನಿರೀಕ್ಷಿಸುತ್ತಿಲ್ಲ. ಈ ಫೋಟೊಗಳನ್ನು ಎಲ್ಲಿಗೆ ಕೊಡಬೇಕೊ ಅಲ್ಲಿಗೆ ಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.
ರೋಹಿಣಿ ಅವರು ಇತ್ತೀಚೆಗೆ ಶಾಸಕರೊಬ್ಬರ ಜೊತೆ ಸಂಧಾನಕ್ಕೆ ಹೋಗಿದ್ದಾರೆ. ಹೀಗೆ ಸಂಧಾನ ಮಾಡಿಕೊಳ್ಳುವುದರ ಅರ್ಥ ಏನು. ಇದೇನು ಅವರ ನಡುವಳಿಕೆ. ಏನು ಮಾಡಬಾರದ ಕೆಲಸ ಮಾಡಿದ್ದಾರೆ ಎಂದು ಸಂಧಾನಕ್ಕೆ ಹೋಗಿದ್ದಾರೆ. ಒಬ್ಬ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋಗಿದ್ದಾರೆ ಎಂಬುದು ಇತಿಹಾಸದಲ್ಲೇ ನಾನೂ ಕೇಳಿರುವುದು ಇದೇ ಮೊದಲು’ ಎಂದು ರೂಪಾ ಹೇಳಿದ್ದಾರೆ.
ಶಾಸಕರ ಮೇಲೆ ಈಗಾಗಲೇ ಸಿಂಧೂರಿ ಹಲವು ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಒಂದು ವೇಳೆ ಸಂಧಾನ ಯಶಸ್ವಿ ಆಗಿದೆ ಎಂದಾದರೆ ಇದುವರೆಗೆ ಮಾಡಿದ ಆರೋಪಗಳೆಲ್ಲಾ ಕೊಚ್ಚಿ ಹೋಗ್ತಾವ, ಸರ್ಕಾರಿ ಕೆಲಸ ದೇವರ ಕೆಲಸ. ಹೀಗೆ ಸಂಧಾನ ಮಾಡಿಕೊಳ್ಳುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ರೋಹಿಣಿ ಸಿಂಧೂರಿ ನಡುವಳಿಕೆ ಬಗ್ಗೆ ಈಗಾಗಲೇ ಹೇಳಿದ್ದೇನೆ. ಕನ್ನಡಿಗ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ. ರವಿ ಸಹ ಮದುವೆಯಾಗಿದ್ದರು. ರೋಹಿಣಿ ಅವರೂ ಮದುವೆಯಾಗಿದ್ದರು. ಒಂದು ವೇಳೆ ಡಿಕೆ ರವಿ ಅನುರಾಗ ವ್ಯಕ್ತಪಡಿಸಿದ್ದರೆ ಅವರನ್ನು ಪರ್ಮನೆಂಟ್ ಆಗಿ ಬ್ಲಾಕ್ ಮಾಡಬಹುದಿತ್ತು. ಆದರೆ, ಅವರ ಮೆಸೇಜ್ಗಳನ್ನು ಇಟ್ಟುಕೊಂಡಿದ್ದು ಏಕೆ. ಸಿಬಿಐ ವರದಿಯಲ್ಲೂ ಈ ಬಗ್ಗೆ ಪ್ರಸ್ತಾಪವೂ ಇದೆ. ಈ ಬಗ್ಗೆ ಇನ್ನೂ ಸಮಗ್ರವಾಗಿ ತನಿಖೆಯಾಗಬೇಕು. ರೋಹಿಣಿ ಅವರಿಂದ ಹಲವಾರು ಮಹಿಳೆಯರು ನೊಂದಿದ್ದಾರೆ. ಆದರೆ, ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ. ಅವರೆಲ್ಲರಿಗೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ ಅಶ್ಲೀಲ ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಪಿಕ್ಚರ್ಗಳು ನನಗೆ ಸಿಕ್ಕಿವೆ. ಇದು ಖಾಸಗಿ ವಿಷಯ ಆಗುವುದಿಲ್ಲ. ಆಲ್ ಇಂಡಿಯಾ ಸರ್ವಿಸ್ ಕಂಡಕ್ಟ್ ರೂಲ್ಸ್ ಪ್ರಕಾರ ಹಿರಿಯ ಅಧಿಕಾರಿಗಳು ಈ ರೀತಿಯ ಚಿತ್ರಗಳನ್ನು, ಸಂಭಾಷಣೆ ಮಾಡುವುದು ಅಪರಾಧ. ಈ ಆಪಾದನೆಗಳನ್ನು ಸರ್ಕಾರ ತನಿಖೆ ಮಾಡುವುದೇ, ನೋಡಬೇಕಿದೆ. ಏಕೆಂದರೆ ಸತ್ಯಾಸತ್ಯತೆ ಹೊರ ಬರಬೇಕಿದೆ ಎಂದು ರೂಪಾ ಹೇಳಿದ್ದಾರೆ.
ರೂಪಾ ವಿರುದ್ಧ ಕಾನೂನು ಕ್ರಮ :
ಇನ್ನು ರೂಪಾ ಅವರ ಆರೋಪದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ, ‘ರೂಪಾ ಐಪಿಎಸ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ನನ್ನ ಮೇಲೆ ವೈಯಕ್ತಿಕ ಹಗೆಯನ್ನು ಸಾಧಿಸಲು ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೂಪಾ ಅವರಿಗೆ ಇದೊಂದು ಅಭ್ಯಾಸವಾಗಿಬಿಟ್ಟಿದೆ. ಅವರು ಇತ್ತೀಚಿನ ವರ್ಷಗಳಲ್ಲಿದ್ದ ಎಲ್ಲಾ ಹುದ್ದೆಗಳಲ್ಲಿ ಈ ರೀತಿಯ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಮಾಧ್ಯಮದ ಗಮನ ಸೆಳೆಯುವ ಹಾಗೂ ತಾವು ದ್ವೇಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕ ಹಗೆತನ ಸಾಧಿಸಲು ಕೀಳುಮಟ್ಟದ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಿಂದ ಹಾಗೂ ವಾಟ್ಸ್ಆ್ಯಪ್ ಸ್ಟೇಟಸ್ಗಳಿಂದ ಸ್ಕ್ರೀನ್ ಶಾಟ್ಗಳ ಮೂಲಕ ಸಂಗ್ರಹಿಸಿರುವ ಫೋಟೊಗಳನ್ನು ನನ್ನ ತೇಜೋವಧೆ ಮಾಡಲು ರೂಪಾ ಐಪಿಎಸ್ ಅವರು ಬಳಸಿದ್ದಾರೆ. ಈ ಫೋಟೊಗಳನ್ನು ನಾನು ಕೆಲ ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎನ್ನುವ ಸುಳ್ಳು ಆರೋಪ ಮಾಡಿರುವ ಅವರು ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.
ರೂಪಾ ಅವರ ಮೇಲೆ ಸೇವಾ ನಡತೆಗಳ ಉಲ್ಲಂಘನೆಗಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ನಾನೂ ಸಕ್ಷಮ ಪ್ರಾಧಿಕಾರದ ಮುಂದು ದೂರು ಸಲ್ಲಿಸಲಿದ್ದೇನೆ. ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ರೂಪಾ ಐಪಿಎಸ್ ಅವರ ಮೇಲೆ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ. ಇಂತಹ ಆಧಾರ ರಹಿತ ಆರೋಪಗಳಿಂದ ನಾನು ಸ್ವಲ್ಪವೂ ವಿಚಲಿತಳಾಗದೆ, ಸರ್ಕಾರಿ ಅಧಿಕಾರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮುಂದುವರಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.