ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.23: ನಗರಕ್ಕೆ ಸಮೀಪದಲ್ಲಿ 2,000 ಎಕರೆ ಜಾಗದಲ್ಲಿ ಜ್ಞಾನ ನಗರ (ನಾಲೆಡ್ಜ್ ಸಿಟಿ) ಕಟ್ಟುವ ಚಿಂತನೆ ಸರಕಾರಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಸೆಂಟ್ರಲ್ ಕಾಲೇಜಿನ ಜ್ಞಾನಭಾರತಿ ಸಭಾಂಗಣದಲ್ಲಿ ಆಯೋಜಿಸಿರುವ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ನವೀಕೃತ ಆವರಣವನ್ನು ಉದ್ಘಾಟಿಸಿ ಮಾತನಾಡಿದರು.
ಐಐಟಿ, ಹಾವರ್ಡ್ ವಿಶ್ವವಿದ್ಯಾಲಯಗಳು, ಇಲ್ಲಿ ಕಲಿತು ನಮ್ಮ ಮಕ್ಕಳ ಭವಿಷ್ಯ ಬರೆಯುವ ಒಕ್ಕಣಿಕೆ ಅವರ ಕೈಯಲ್ಲಿಯೇ ಇರಬೇಕು ಎಂದರು.
ನಾಲೆಡ್ಜ್ ಸಿಟಿಯ ಮೂಲಕ ಭಾರತದ ಮತ್ತು ವಿದೇಶಗಳ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಒಂದೇ ಕಡೆ ನೆಲೆಯೂರುವಂತೆ ಮಾಡಲಾಗುವುದು. ಅಂತರರಾಷ್ಟ್ರೀಯ ಮಟ್ಟದ ಉತ್ತಮ ವಿವಿಗಳು ಇಲ್ಲಿಗೆ ಬರುವ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ಶೈಕ್ಷಣಿಕ ಜಿಲ್ಲೆ
ಬೆಂಗಳೂರು ವಿಶ್ವವಿದ್ಯಾಲಯದ ಭಾಗದಲ್ಲಿ ಆರು ಶೈಕ್ಷಣಿಕ ಸಂಸ್ಥೆಗಳು, ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಅದರ ಅಭಿವೃದ್ಧಿಗೆ ಹಣವನ್ನು ನೀಡಲಾಗುತ್ತಿದೆ. ಈ ಎಲ್ಲಾ ಸಂಸ್ಥೆಗಳೂ ಇದಕ್ಕೆ ಕೊಡುಗೆ ನೀಡಲಿವೆ. ಇಡೀ ವಿಶ್ವದಲ್ಲಿಯೇ ಒಂದೆಡೆ ಇಷ್ಟು ಶೈಕ್ಷಣಿಕ ಸಂಸ್ಥೆಗಳಿವೆ . ಅವೆಲ್ಲಕ್ಕೂ ಕೂಡ ಸಾಮಾನ್ಯ ಸೌಲಭ್ಯಗಳನ್ನು ಸೃಷ್ಟಿಸಬೇಕು ಮತ್ತು ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲು ತೀರ್ಮಾನ ಮಾಡಲಾಗಿದೆ. ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತಿದು, ಇದು ಯಶಸ್ವಿಯಾದರೆ, ಶೈಕ್ಷಣಿಕ ಜಿಲ್ಲೆಗಳನ್ನು ಸೃಜಿಸಲಾಗುವುದು. ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದರು.
“ಈ ವಿಶ್ವವಿದ್ಯಾಲಯದ ಜಾಗವನ್ನು ಬೆಂಗಳೂರು ಎಜುಕೇಶನ್ ಡಿಸ್ಟ್ರಿಕ್ಟ್ ಆಗಿ ಅಭಿವೃದ್ಧಿಪಡಿಸಲಾಗುವುದು. ಇದು ಯಶಸ್ವಿಯಾದರೆ ಈ ಪರಿಕಲ್ಪನೆಯನ್ನು ರಾಜ್ಯದ ಉಳಿದ ಭಾಗಗಳಿಗೂ ವಿಸ್ತರಿಸಲಾಗುವುದು” ಎಂದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯುತ್ತಮವಾಗಿದ್ದು, ಇದರ ಜಾರಿಯಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ಎನ್ಇಪಿಯಲ್ಲಿ ವಿದ್ಯಾರ್ಥಿಗಳ ಲಂಬ ಕಲಿಕೆ ಸಾಧ್ಯವಾಗಲಿದೆ. ಈಗ ವಿದ್ಯಾರ್ಥಿಗಳು ಕಲೆ, ವಿಜ್ಞಾನ ಮತ್ತು ವಾಣಿಜ್ಯ ಅಧ್ಯಯನಗಳ ನಡುವೆ ಯಾವ ವಿಭಾಗಕ್ಕಾದರೂ ಹೋಗಬಹುದು ಎಂದರು.
ಬೆಂಗಳೂರು ನಗರ ವಿವಿ ಸುತ್ತಮುತ್ತ ಹತ್ತಾರು ಜ್ಞಾನಧಾರೆಗಳನ್ನು ಕಲಿಸುವ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳಿವೆ. ಇವುಗಳನ್ನು ಪರಿಣಾಮಕಾರಿಯಾಗಿ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು ಎನ್ನುವುದೇ ಎಜುಕೇಶನ್ ಡಿಸ್ಟ್ರಿಕ್ಟ್ ಪರಿಕಲ್ಪನೆಯ ಆಶಯವಾಗಿದೆ. ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ಯು ಆರ್ ರಾವ್ ನೇತೃತ್ವದ ಟಾಸ್ಕ್ ಫೋರ್ಸ್ ಹಲವು ವರ್ಷಗಳ ಹಿಂದೆಯೇ ಈ ಶಿಫಾರಸನ್ನು ಮಾಡಿತ್ತು ಎಂದು ಅವರು ವಿವರಿಸಿದರು.
ನಂಬರ್ 1 ವಿವಿ ಆಗಬೇಕು
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಮಾತನಾಡಿ, “ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ನಗರ ವಿವಿ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿ ವಿರಾಜಿಸಬೇಕು. ವಿ.ವಿ.ಗಳು ಯಾವುದೇ ಬೇಲಿ ಹಾಕಿಕೊಳ್ಳದೆ, ಕಲಿಕೆಯ ಸೀಮೋಲ್ಲಂಘನ ಮಾಡಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚವಾಣ್, ಕುಲಪತಿ ಲಿಂಗರಾಜ ಗಾಂಧಿ, ಕುಲಸಚಿವ (ಆಡಳಿತ) ಶ್ರೀಧರ್ , ಮೌಲ್ಯಮಾಪನ ವಿಭಾಗದ ಕುಲಸಚಿವ ಲೋಕೇಶ್, ವಿಶ್ರಾಂತ ಕುಲಪತಿ ಪ್ರೊ ಜಾಫೆಟ್, ಪತ್ರಿಕೋದ್ಯಮ ವಿಭಾಗದ ಪ್ರೊ.ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು