ಸುದ್ದಿಮೂಲ ವಾರ್ತೆ
ಮಾಗಡಿ, ಮಾ.25: ಒಂಬತ್ತು ವರ್ಷಗಳ ಹಿಂದೆ (2014ರಲ್ಲಿ) ಆರಂಭವಾಗಿ ನನೆಗುದಿಗೆ ಬಿದ್ದಿದ್ದ ಶ್ರೀರಂಗ ನೀರಾವರಿ ಯೋಜನೆಯಡಿ 100 ಕೆರೆಗಳಿಗೆ ನೀರು ತುಂಬಿಸಲು ಬಿಜೆಪಿ ಸರ್ಕಾರವು 1000 ಕೋಟಿ ರೂಪಾಯಿಗಳನ್ನು ನೀಡಿ ಈ ಯೋಜನೆ ಅನುಷ್ಠಾನಗೊಳ್ಳಲು ಮುತುವರ್ಜಿ ವಹಿಸಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಶುಕ್ರವಾರ ಹೇಳಿದರು.
ಪಟ್ಟಣದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಹಾಗೂ ಮತ್ತಿತರ ಕೆಲಸಗಳಿಗೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಚಾಲನೆ ಕೊಡಲಾಯಿತು. ಈ ಯೋಜನೆಯಲ್ಲಿ ಮುಂಚೆ ಸಿಮೆಂಟ್ ಪೈಪ್ ಬಳಸಲು ಉದ್ದೇಶಿಸಲಾಗಿತ್ತು. ಆದರೆ ನಮ್ಮ ಸರ್ಕಾರವು ಸ್ಟೀಲ್ ಪೈಪ್ ಬಳಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿದೆ ಎಂದು ವಿವರಿಸಿದರು.
ಮಾಗಡಿ ತಾಲೂಕು ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ನೀರಾವರಿ ಸೌಲಭ್ಯ ಇರುವ ತಾಲೂಕಾಗಿದ್ದು ಆ ಪ್ರಮಾಣ 1% ಗಿಂತ ಕಡಿಮೆ ಇದೆ. ಇದನ್ನು ಮನಗಂಡು ರಾಜ್ಯ ಸರ್ಕಾರವು ತಾಲೂಕಿನ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿದೆ ಎಂದರು.
ಇದಲ್ಲದೆ, ತಾಲೂಕಿನ ಚಿಕ್ಕಕಲ್ಯದಲ್ಲಿ 65 ಕೋಟಿ ರೂಪಾಯಿಯ ಜಿಟಿಟಿಸಿ ಯನ್ನು ಕೇವಲ ಒಂದೇ ವರ್ಷದ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದು ಯಾವುದೇ ಎಂಜಿನಿಯರಿಂಗ್ ಕಾಲೇಜಿಗೆ ಕಡಿಮೆ ಇಲ್ಲದಂತಹ ಹೆಮ್ಮೆಯ ಶೈಕ್ಷಣಿಕ ಕೇಂದ್ರವಾಗಲಿದೆ ಎಂದು ಸಚಿವರು ನುಡಿದರು.
ಇದರ ಜೊತೆಗೆ ಮಾಗಡಿ ಮತ್ತು ಬಿಡದಿಗಳಲ್ಲಿ ಐಟಿಐ ಕಾಲೇಜುಗಳು ನಿರ್ಮಾಣವಾಗಲಿವೆ. ಬಿಡದಿಯಲ್ಲಿ ಪಾಲಿಟೆಕ್ನಿಕ್ ಕೂಡ ಸ್ಥಾಪನೆಯಾಗಲಿದೆ. ಮಾಗಡಿ ತಾಲ್ಲೂಕಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಮೈದಾಳಲಿದೆ. ಮುಕ್ತ ವಿ.ವಿ. ಪ್ರಾದೇಶಿಕ ಕೇಂದ್ರ ಕೂಡ ಸ್ಥಾಪನೆಯಾಗಲಿದೆ. ಇವೆಲ್ಲವೂ ರಾಜ್ಯ ಸರ್ಕಾರವು ಮಾಗಡಿ ತಾಲೂಕು ಹಾಗೂ ರಾಮನಗರ ಜಿಲ್ಲೆಗೆ ನೀಡಿರುವ ಅಭಿವೃದ್ಧಿ ಕೊಡುಗೆಗಳಾಗಿವೆ ಎಂದರು.
ಇದೇ ವೇಳೆ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ 2.25 ಲಕ್ಷ ಕುಟುಂಬಗಳಿಗೆ ಮನೆ ಮನೆಗೆ ನದಿ ನೀರಿನ ಶುದ್ಧ ನೀರು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ಅನುಷ್ಠಾನಗೊಳಿಸಿವೆ ಎಂದರು.
ಶಾಸಕ ಎ. ಮಂಜುನಾಥ್ ಮಾತನಾಡಿ, ಸಚಿವ ಅಶ್ವತ್ಥನಾರಾಯಣ ಕೇವಲ ಭಾಷಣ ಮಾಡುವವರಲ್ಲ. ಇವರು ಪಟ್ಟು ಹಿಡಿದು ಕೆಲಸ ಮಾಡುವ ವ್ಯಕ್ತಿ. ನಾವು ಗುಣಕ್ಕೆ ಮತ್ಸರ ಪಡಬಾರದು. ಜಿಲ್ಲಾಉಸ್ತುವಾರಿ ಸಚಿವರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಹೆಚ್ಚು ಅನುದಾನ ನೀಡಿ ಹಲವು ಯೋಜನೆಗಳನ್ನು ನೀಡಿದ್ದಾರೆ. ನಾನು ಜೆಡಿಎಸ್ ಪಕ್ಷ, ನಮ್ಮ ಮಂತ್ರಿಗಳು ಬಿಜೆಪಿ. ಆದರೂ ಅವರ ಕಾರ್ಯವೈಖರಿ ಮೆಚ್ಚುವಂತಹದ್ದು. ಕ್ಷೇತ್ರಕ್ಕೆ ಹೊಸ ಹೊಸ ಕಾಲೇಜು ನೀಡಿದ್ದಾರೆ. ಕೆಂಪೇಗೌಡ ಸಮಾಧಿ ಅಭಿವೃದ್ಧಿ, ಮಾಗಡಿ ಕೋಟೆ ಮಾಡುವಲ್ಲಿ ಸಚಿವರು ಶ್ರಮ ವಹಿಸಿದ್ದಾರೆ ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಾಂತರಾಜ್, ಡಾ.ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.