ಸುದ್ದಿಮೂಲ ವಾರ್ತೆ
ಹುಬ್ಬಳ್ಳಿ, ಮಾ.27: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕವೇ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಟ್ಟಿಯನ್ನು ಯಾವಾಗಲೂ ಚುನಾವಣೆ ಘೋಷಣೆ ಯಾದ ನಂತರವೇ ಬಿಡುಗಡೆ ಮಾಡುವುದು. ಅದರಂತೆಯೇ ಈ ಬಾರಿಯೂ ಮಾಡಲಾಗುತ್ತದೆ ಎಂದರು. ಸರಿಯಾದ ಸಮಯದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ತುಳಿತಕ್ಕೊಳಗಾದ ಜನಾಂಗಗಳಿಗೆ ನ್ಯಾಯ ದೊರಕಿಸುವವರೆಗೂ ವಿಶ್ರಮಿಸುವುದಿಲ್ಲ. ಜೇನುಗೂಡಿಗೆ ಕೈಹಾಕಬೇಡಿ ಎಂದು ಬಹಳಷ್ಟು ಜನ ಹೇಳಿದ್ದರೂ ನಾವು ತುಳಿತಕ್ಕೆ ಒಳಗಾಗಿರುವ ಜನರಿಗೆ ಜೇನುತುಪ್ಪ ದೊರೆಯಲಿ ಎಂದು ಒಳಮೀಸಲಾತಿಯ ನಿರ್ಧಾರ ಮಾಡಲಾಗಿದೆ ಎಂದರು.
ಮೀಸಲಾತಿ ವಿಚಾರದಲ್ಲಿ ಬೇಡಿಕೆ ಸುಮಾರು 30 ವರ್ಷಗಳಿಂದ ಇದೆ. ಕಾಂಗ್ರೆಸ್ ಅವರಿಗೆ ಆಶ್ವಾಸನೆಗಳನ್ನು ನೀಡಿ ಮೂಗಿಗೆ ತುಪ್ಪ ಹಚ್ಚಿ ಕೊನೆಗೆ ಗಳಿಗೆಯಲ್ಲಿ ಕೈಕೊಟ್ಟಿತು. ಬಿಜೆಪಿಗೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದ್ದರು. ಆದರೆ ನಮಗೆ ಬದ್ಧತೆಯಿದೆ. ವರದಿ ತರಿಸಿ, ಅಧ್ಯಯನ ಮಾಡಿ, ಸಂಪುಟ ಉಪ ಸಮಿತಿ ರಚಿಸಿ, ಕಾನೂನಿನ ಪ್ರಕಾರ ವ್ಯವಸ್ಥಿತವಾಗಿ ತೀರ್ಮಾನ ಮಾಡಲಾಗಿದೆ ಎಂದರು.
ಕಾಂಗ್ರೆಸ್ ನವರಿಗೆ ನಾವು ಮಾಡದಿದ್ದುದ್ದನ್ನು ಬಿಜೆಪಿ ಮಾಡಿದೆ ಎಂಬ ಹತಾಶ ಮನೋಭಾವ ದಿಂದ ಮಾತನಾಡುತ್ತಿದ್ದಾರೆ. ಅದಕ್ಕೆ ಕಿಮ್ಮತ್ತಿಲ್ಲ. ಅವರು ಸದಾ ಎಸ್.ಸಿ ಎಸ್.ಟಿ ಅವರನ್ನು ಯಾಮಾರಿಸಿಕೊಂಡೇ ಬಂದಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ಅದು. ಸಹಾನುಭೂತಿ ತೋರಿಸುವ ಮೂಲಕ ಮತ ಪಡೆಯಬಹುದು ಎಂದು ಎಣಿಸಿದ್ದಾರೆ. ಆದರೆ ಅದಕ್ಕೆ ನಿರ್ಣಯ ಮಾಡುವ ಸರ್ಕಾರ ಇದೆ ಎಂದು ತಿಳಿದಿರಲಿಲ್ಲ. ನಾವು ಸಾಮಾಜಿಕ, ಅಭಿವೃದ್ಧಿ, ಸಂಘಸಂಸ್ಥೆಗಳ ಬೇಡಿಕೆ ವಿಚಾರದಲ್ಲಿಯಾಗಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಗಳನ್ನು ಮಾಡಿದ್ದೇವೆ. ಈ ಬಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ನಿರ್ಣಾಯಕ ತೀರ್ಮಾನ ಮಾಡುವ ಸರ್ಕಾರ ಇದೆ ಎಂದರು.
ಅಲ್ಪಸಂಖ್ಯಾತರ ಹಿತರಕ್ಷಣೆ
ಮುಸ್ಲಿಮರಿಗೆ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಿ ಶೇ 4 ರಷ್ಟಿದ್ದ ಮೀಸಲಾತಿಯನ್ನು ಹಂಚಿ ಅನ್ಯಾಯ ಮಾಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಶೇ 4 ರಲ್ಲಿ ಅವರಿಗೆ ಆರ್ಥಿಕವಾಗಿ ಅರ್ಹತೆ ಇದೆ. ನಾಲ್ಕರ ಬದಲಿದೆ ಶೇ 10 ರಷ್ಟು ನೀಡಲಾಗಿದೆ. ಅನ್ಯಾಯ ಹೇಗಾಗುತ್ತದೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಹಿತರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗಿದೆ ಎಂದರು.