ಸುದ್ದಿಮೂಲ ವಾರ್ತೆ:
ತುಮಕೂರು ಮಾ.29: ಜಿಲ್ಲೆಯ ಎಲ್ಲಾ ಇಲಾಖೆಗಳು ಫೆಬ್ರವರಿ ಅಂತ್ಯಕ್ಕೆ ಎಸ್ಸಿಪಿ ಯೋಜನೆಯಡಿ ಶೇಕಡಾ 92ರಷ್ಟು ಹಾಗೂ ಟಿಎಸ್ಪಿ ಯೋಜನೆಯಡಿ ಶೇಕಡಾ 85ರಷ್ಟು ಪ್ರಗತಿಯನ್ನು ಸಾಧಿಸಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ/ಗಿರಿಜನ ಉಪಯೋಜನೆಯಡಿ ವಿವಿಧ ಇಲಾಖೆಗಳ ಪ್ರಗತಿ ಸಾಧನೆ ಕುರಿತು ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಗತಿ ಕುಂಠಿತವಾಗಿರುವ ಇಲಾಖೆಗಳು ಮಾರ್ಚ್ ಅಂತ್ಯದೊಳಗೆ ಪ್ರಗತಿ ಸಾಧಿಸಲು ಸೂಚಿಸಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದರು. ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಬಿಡುಗಡೆಯಾದ ಹಣವನ್ನು ಶೇಕಡಾ 100ರಷ್ಟು ಬಳಕೆ ಮಾಡದ ಇಲಾಖೆಯ ಅಧಿಕಾರಿಗಳು ಲಿಖಿತ ರೂಪದಲ್ಲಿ ಸರಿಯಾದ ಕಾರಣವನ್ನು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಗೆ ಮೀಸಲಿಟ್ಟ ಹಣವನ್ನು ಸಂಬಂಧಿಸಿದ ಸಮುದಾಯದ ಅಭಿವೃದ್ಧಿಗಾಗಿ ಮಾತ್ರ ಉಪಯೋಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಯೋಜನೆಯ ಹಣವನ್ನು ಶೇಕಡಾ 100ರಷ್ಟು ಬಳಕೆ ಮಾಡಿದ ಇಲಾಖೆಗಳನ್ನು ಅಭಿನಂದಿಸಿದರು.
ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ್,
ಕೃಷಿ ಇಲಾಖೆ ಜಂಟಿ ನಿರ್ದೇಶಕ ರವೀಶ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್. ಶ್ರೀಧರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ, ಕಾರ್ಮಿಕ ಅಧಿಕಾರಿ ರಮೇಶ್ ಮತ್ತಿತರ ಯೋಜನಾ ಅನುಷ್ಠಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.