ಸುದ್ದಿಮೂಲ ವಾರ್ತೆ
ತುಮಕೂರು, ಮಾ.29: ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯ 11 ಕ್ಷೇತ್ರಗಳಲ್ಲಿ ತುಮಕೂರು ಗ್ರಾಮಾಂತರವೂ ಸೇರಿದಂತೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿ ಶಕ್ತಿಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಈ ಹಿಂದಿನ ಚುನಾವಣೆಗಳಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಸ್ವಾತಂತ್ರವಾಗಿ ಅಧಿಕಾರ ನಡೆಸಲಿದೆ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರ ನನಗೆ ಹಳೆಯ ಪರಿಚಯ. ಈ ಭಾಗದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಲ್ಲದೆ ಸಂಸದನಾಗಿಯೂ ಕೆಲಸ ಮಾಡಿದ್ದೇನೆ. ಹಾಗಾಗಿ ನನ್ನ ಪರಿಚಿತರು, ಹಿತೈಷಿಗಳು ಬಿಜೆಪಿ ಸೇರುತಿದ್ದಾರೆ. ಇಂದು ಸಹ ನೂರಾರು ಜನರು ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರುತಿದ್ದಾರೆ. ಗ್ರಾಮಾಂತರದಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳಲಿದೆ. ಬಿ.ಸುರೇಶಗೌಡರ ಗೆಲುವು ಖಚಿತ ಎಂದು ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ಹಾಲಿ ಶಾಸಕರು ನಕಲಿ ಬಾಂಡ್ಗಳನ್ನು ಹಂಚಿ ಮತ್ತು ಕ್ಷೇತ್ರದ ವಿದ್ಯಾವಂತ ಯುವಕರಿಗೆ ಇನ್ನಿಲ್ಲದ ಆಸೆ, ಆಕಾಂಕ್ಷೆಗಳನ್ನು ತೋರಿಸಿ ಗೆಲುವು ಸಾಧಿಸಿದ್ದಾರೆ. ಈಗಾಗಲೇ ಸದರಿ ವಿಚಾರವಾಗಿ ನ್ಯಾಯಾಲಯದಲ್ಲಿ ವಾದ ವಿವಾದ ಮುಗಿದು, ತೀರ್ಪು ಪ್ರಕಟವಾಗಲಿದೆ. ಹಾಲಿ ಶಾಸಕರು ಸುಳ್ಳು ಭರವಸೆಗಳನ್ನು ನಂಬಿ ಅವರೊಂದಿಗೆ ಇದ್ದ ಬಹುತೇಕ ಮುಖಂಡರು ಬಿಜೆಪಿ ಸೇರಿದ್ದಾರೆ. ಮುಂದೆಯೂ ಕೆಲವರು ಸೇರಲಿದ್ದಾರೆ ಎಂದರು.
ಈ ಭಾಗದಲ್ಲಿ ಎರಡು ಬಾರಿ ಶಾಸಕರಾಗಿ, ಐದು ವರ್ಷ ಸಂಸದರಾಗಿ, 10 ವರ್ಷಗಳ ಕಾಲ ಒಂದು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಬಲ ಬಂದಿದೆ. ಇದು ನನ್ನ ಗೆಲುವಿಗೆ ಸಹಕಾರಿ ಯಾಗಲಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ವಿಜಯಕುಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕಸ್ವಾಮಿ, ಎಪಿಎಂಸಿ ಮಾಜಿ ನಿರ್ದೇಶಕ ನರಸೇಗೌಡ ಸಹಿತ ಹಲವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.