ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.29: ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವುದಾಗಿ ಕಾಂಗ್ರೆಸ್ ರಾಜಕೀಯ ಪ್ರೇರಿತ ಕುತಂತ್ರ ಮಾಡಿದ್ದು ಯಾರನ್ನೂ ತೆಗೆಯುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ಸಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಮುದಾಯಗಳಿಗೆ ಕಾಂಗ್ರೆಸ್ನವರು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಬಂಜಾರ, ಭೋವಿ, ಕೊರಚ ಯಾರನ್ನೂ ಕೂಡ ಪಟ್ಟಿಯಿಂದ ತೆಗೆಯಲಾಗುವುದಿಲ್ಲ. ಈ ಬಗ್ಗೆ ಫೆಬ್ರವರಿ ಮಾಹೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಇವರೆಲ್ಲಾ ಮಹಾರಾಜರ ಕಾಲದಿಂದಲೂ ಇರುವಂಥ ಸಮುದಾಯಗಳು. ಸಂವಿಧಾನ ಆದ ನಂತರ ಇದ್ದ ಆರು ಸಮುದಾಯಗಳಲ್ಲಿ ಇವೂ ಇದ್ದು, ಇದನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಆಧಾರ ಸಮೇತವಾಗಿ ನೀಡಲಾಗಿದೆ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡೂ ಪಕ್ಷಗಳ ವರಿಷ್ಠರು ಆಫರ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರಿಗೆ ಯಾರು ಯಾವಾಗ ಏನು ಕೊಡುಗೆ ನೀಡುತ್ತಾರೆ, ಅವರು ಏನು ಸ್ವೀಕಾರ ಮಾಡುತ್ತಾರೆ ಎಂದು ಅವರಿಗೇ ಗೊತ್ತು ಎಂದರು.
ನಾವು ಬೇರೆ ಪಕ್ಷಗಳ ರೀತಿ ಸುಳ್ಳು ಅಂಕಿ ಸಂಖ್ಯೆಗಳನ್ನು ಹೇಳುವುದಿಲ್ಲ. ನಮಗೆ ಎಲ್ಲಾ ಸಮೀಕ್ಷೆಗಳ ವರದಿ ಬಂದಿದ್ದು, ನಾವು ಬೇರೆ ಪಕ್ಷಗಳಿಗಿಂತ ಮುಂದಿದ್ದೇವೆ ಎಂದರು. ಇದು ಪಕ್ಷದ ಆಂತರಿಕ ವಿಚಾರವಾಗಿದ್ದು, ಬಹಿರಂಗ ಪಡಿಸಲು ಆಗುವುದಿಲ್ಲ ಎಂದರು.
ಚುನಾವಣಾ ಪ್ರಚಾರಕ್ಕೆ ವರಿಷ್ಠರು ಬರುತ್ತಾರೆ. ಏಪ್ರಿಲ್ 9 ರಂದು ಪ್ರಧಾನಿಗಳು ಮೈಸೂರಿಗೆ ಬರುವ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಸರ್ಕಾರದ ಪೂರ್ವನಿಗದಿತ ಕಾರ್ಯಕ್ರಮ ಎಂದರು.
ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ
ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎರಡನೇ ಪಟ್ಟಿ ಸಿದ್ದ ಮಾಡುವಾಗ ನಮ್ಮ ಶಾಸಕರಿಗೆ ಕರೆ ಮಾಡಿದ್ದಾರೆ. ನಮ್ಮ ಶಾಸಕರನ್ನು ಸಂಪರ್ಕಿಸಿರುವುದು ಅವರ ಪರಿಸ್ಥಿತಿ ತೋರಿಸುತ್ತದೆ. ಗಟ್ಟಿಯಾದ ಅಭ್ಯರ್ಥಿ ಗಳಿದ್ದಿದ್ದರೆ ನಮ್ಮ ಶಾಸಕರಿಗೆ ಕರೆ ಮಾಡುತ್ತಿರಲಿಲ್ಲ. ಸಾರಾಸಗಟಾಗಿ ಎಲ್ಲರಿಗೂ ಕರೆ ಮಾಡಿ ನಮ್ಮದಿನ್ನೂ ನಿರ್ಣಯವಾಗಿಲ್ಲ, ನೀವು ಬಂದರೆ ನಿಮಗೆ ಟಿಕೆಟ್ ಕೊಡುವುದಾಗು ಹೇಳಿದ್ದಾರೆ ಎಂದರು. ನಮ್ಮ ಪಕ್ಷದವರು ಅವರು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ಗೆ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ವಲಸಿಗರು ಸೇರಿದಂತೆ ಮೂಲ ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿದ್ದಾರೆ. ಈ ಬಾರಿ ಸ್ಪಷ್ಟ ಬಹುಮತದ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.