ಸುದ್ದಿಮೂಲ ವಾರ್ತೆ
ಆನೇಕಲ್, ಮಾ.29: ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಸರ್ಜಾಪುರ ಪೊಲೀಸರು ಅವರಿಂದ 60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಫೆ.23ರಂದು ಅತ್ತಿಬೆಲೆಯ ಯೂನಿಯನ್ ಬ್ಯಾಂಕ್ ಲಾಕರ್ನಿಂದ ಮಗಳ ಮದುವೆಗಾಗಿ ಲಕ್ಷ್ಮೀನಾರಾಯಣ ಮತ್ತು ಜಲಜಾಕ್ಷಿ ಎಂಬುವವರು ಚಿನ್ನವನ್ನು ಬಿಡಿಸಿಕೊಂಡು ಕಾರಿನಲ್ಲಿ ಮನೆಗೆ ಒಯ್ಯುತ್ತಿದ್ದರು. ಕಾರಿನ ಗಾಜು ಹೊಡೆದು ಆ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿತ್ತು.
ಬಂಧಿತರನ್ನು ಆಂಧ್ರಪ್ರದೇಶದ ಪಾಂಡುರಂಗ, ಓಜಿ ಕುಪ್ಪಂನ ಅಂಕಯ್ಯ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 60 ಲಕ್ಷ ಬೆಳೆಬಾಳುವ 703 ಗ್ರಾಂ ತೂಕದ ವಜ್ರ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಂದು ಒಡವೆ ಕಳೆದುಕೊಂಡಿದ್ದ ಲಕ್ಷ್ಮೀನಾರಾಯಣ ಅವರು ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.