ಸುದ್ದಿಮೂಲ ವಾರ್ತೆ
ತುಮಕೂರು, ಮಾ.31: ತುಮಕೂರು ತಾಲ್ಲೂಕಿನ ಹಾಲನೂರು ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಪುರಾಣ ಪ್ರಸಿದ್ಧ ಶ್ರೀ ಮಲ್ಲೇಶ್ವರ ಸ್ವಾಮಿ, ಪಾರ್ವತಿದೇವಿ ಜಾತ್ರಾ ಮಹೋತ್ಸವ ಏಪ್ರಿಲ್ 2 ರಿಂದ 10 ರವರೆಗೆ ನಡೆಯಲಿದೆ.
ಮುಜರಾಯಿ ಇಲಾಖೆ ಹಾಗೂ ಹಾಲನೂರು ಗ್ರಾಮಸ್ಥರು, ಭಕ್ತಮಂಡಳಿ ಸಹಯೋಗದಲ್ಲಿ ಏಪ್ರಿಲ್ 2ರಂದು ಅಕ್ಕಿಪೂಜೆಯೊಂದಿಗೆ ಆರಂಭವಾಗುವ ಜಾತ್ರಾ ಮಹೋತ್ಸವ ಏಪ್ರಿಲ್ 4ರಂದು ಮಧ್ಯಾಹ್ನ ಪಾರ್ವತಾದೇವಿ ಸಮೇತ ಶ್ರೀ ಮಲ್ಲೇಶ್ವರ ಸ್ವಾಮಿ ನೂತನ ಬ್ರಹ್ಮ ರಥೋತ್ಸವ ನಡೆಯಲಿದೆ.
ಸುಂದರವಾದ ರಥವನ್ನು ಮಲ್ಲಸಂದ್ರ ಪಾಳ್ಯದ ನಾಗರಿಕರು ನೂತನವಾಗಿ ನಿರ್ಮಿಸಿಕೊಟ್ಟಿದ್ದಾರೆ. ಜಾತ್ರೆಯ ಪ್ರಮುಖ ಘಟ್ಟ ಉಪ್ಪರಿಗೆ ವಾಹನ ಏಪ್ರಿಲ್ 6 ರಂದು ಪೌರ್ಣಿಮೆ ಬೆಳದಿಂಗಳಲ್ಲಿ ನಡೆಯಲಿದೆ. ಸುಮಾರು 50 ಅಡಿ ಎತ್ತರದ ಉಪ್ಪರಿಗೆ ವಾಹನವನ್ನು ಹಾಲನೂರು ಗ್ರಾಮಸ್ಥರು ಹಾಗೂ ಭಕ್ತ ವೃಂದ ತಮಿಳುನಾಡು ಕುಶಲಕರ್ಮಿಗಳಿಂದ ಟೀಕ್ ಮರದಲ್ಲಿ ಭವ್ಯವಾಗಿ ನಿರ್ಮಿಸಿಕೊಟ್ಟಿರುವುದು ಈ ವರ್ಷದ ಜಾತ್ರೆಯ ವಿಶೇಷವಾಗಿದೆ. ಉಪ್ಪರಿಗೆ ವಾಹನ ಪ್ರತಿವರ್ಷ ಯುಗಾದಿ ನಂತರದ ಹುಣ್ಷಿಮೆ ಬೆಂಗಳೂರು ಕರಗದಂದು ನಡೆದುಕೊಂಡು ಬರುತ್ತಿದೆ.ಜೊತೆಗೆ ರಾತ್ರಿ 9.30 ರಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಆಯೋಜನೆಗೊಂಡಿದೆ.
ಏಪ್ರಿಲ್ 7ರಂದು ರುದ್ರಾಕ್ಷಿ ಉತ್ಸವ, ಏ.8 ರಂದು ಅಡ್ಡಪಲ್ಲಕ್ಕಿ ಉತ್ಸವ, ಏ.9 ರಂದು ಭಾನುವಾರ ತೆಪ್ಪೋತ್ಸವ ನಡೆಯಲಿದ್ದು ಏ.10 ರಂದು ಸೋಮವಾರ ವಸಂತೋತ್ಸವ, ಓಕಳಿ ಮೆರವಣಿಗೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಜಾತ್ರೆಯ 9 ದಿನಗಳೂ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ ಎಂದು ಶ್ರೀ ಮಲ್ಲೇಶ್ವರ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.