ಸುದ್ದಿಮೂಲ ವಾರ್ತೆ
ತುಮಕೂರು,ಮಾ.31: ಲಂಬಾಣಿ ಸಮುದಾಯದ ವಿರುದ್ದ ಮಾತನಾಡಿರುವ ಸಂಸದ ಜಿ.ಎಸ್. ಬಸವರಾಜು ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ಬಂಜಾರ ಜಾಗೃತಿ ದಳ ಆಗ್ರಹಿಸಿದೆ.
ತುಮಕೂರು ಜಿಲ್ಲಾಡಳಿತ ಮತ್ತು ಅಗ್ನಿವಂಶ ಕ್ಷತ್ರಿಯ ತಿಗಳ ಜನಾಂಗ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಅಗ್ನಿ ಬನ್ನಿರಾಯಸ್ವಾಮಿ ಜಯಂತ್ಯೋತ್ಸವದಲ್ಲಿ ವಿನಾ ಕಾರಣ ಲಂಬಾಣಿ ಸಮಾಜದ ವಿರುದ್ದ ಮಾತನಾಡಿರುವ ಸಂಸದ ಜಿ.ಎಸ್.ಬಸವರಾಜು ಅವರು ಸಂವಿಧಾನದ ಮೂಲ ಆಶಯ ತಿಳಿದುಕೊಳ್ಳಬೇಕಾಗಿದೆ ಕರ್ನಾಟಕ ಬಂಜಾರ ಜಾಗೃತಿ ದಳದ ರಾಜ್ಯಾಧ್ಯಕ್ಷರಾದ ತಿಪ್ಪಸರ್ ನಾಯ್ಕ ಹೇಳಿದರು.
ನಗರದಲ್ಲಿ ಜಿಲ್ಲಾ ಮುಖಂಡರುಗಳಾದ ಜಯರಾಂ ನಾಯ್ಕ, ಉಮೇಶ್ ನಾಯ್ಕ್, ಶೇಖರ್ ನಾಯ್ಕ್,ನಾರಾಯಣ ನಾಯ್ಕ್,ಪೃಥ್ವಿ ನಾಯ್ಕ್ ಶಿವಾನಂದ ರಾಠೋಡ್, ಗೋವಿಂದನಾಯ್ಕ, ಹಾಗೂ ರಮೇಶ್ ನಾಯ್ಕ ಸೇರಿದಂತೆ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಉತ್ತರ ಭಾರತದಿಂದ ರಾಜ್ಯಕ್ಕೆ ವಲಸೆ ಬಂದವರು ಮೀಸಲಾತಿ ಲಾಭ ಪಡೆದು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಈಗ ಅವರೇ ಒಳಮೀಸಲಾತಿ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೇಳಿದ್ದಾರೆ ಎಂದರು.
ಸಂಸದರಿಗೆ ನಿಜವಾಗಿಯೂ ಕೂಡ ನೈತಿಕತೆಯಿಲ್ಲ. ಸಂಸದರು ಮೊದಲು ಮೀಸಲಾತಿಯ ಸೇರ್ಪಡೆ ಹೇಗಾಯಿತು ಎಂದು ತಿಳಿದುಕೊಳ್ಳಲಿ. ಒಳಮೀಸಲಾತಿ ವೈಜ್ಞಾನಿಕವಾಗಿ ಜಾರಿಯಾಗಿದೆಯೇ ಎಂದು ಪರಿಶೀಲಿಸಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಈ ಸಮುದಾಯಗಳು ರೆಡ್ ಕಮ್ಯೂನಿಟಿ ಲೀಸ್ಟ್ 1935ರ ಇಂಡಿಯನ್ ಆಕ್ಟ್ ಸ್ವತಂತ್ರ ನಂತರದ 1950ರ ಮೊದಲ ಪರಿಶಿಷ್ಟ ಜಾತಿಗಳ ಅನುಮೋದಿತ ಪಟ್ಟಿ ಮತ್ತು ಕರ್ನಾಟಕ ಏಕೀಕರಣ ಪ್ರಾದೇಶಿಕ ಮಿತಿ ಸಡಲಿಕೆ ಆದಾಗಿನಿಂದಲೂ ಸಂವಿಧಾನಿಕವಾಗಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ನ್ಯಾಯ ಸಮ್ಮತ ಸ್ಥಾನ ಪಡೆದಿದೆ. ಇದನ್ನು ಸಂಸದರು ತಿಳಿದುಕೊಳ್ಳಲಿ ಎಂದು ಹೇಳಿದರು.
ಈಗಾಗಲೇ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವಂತಹ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಹೇಳಿಕೆಯ ವಿರುದ್ದ ಅಭಿಯಾನ ಪ್ರಾರಂಭವಾಗಿದೆ. ಭಾ.ಜ.ಪ ಪಕ್ಷದಲ್ಲಿ ಸಮುದಾಯದ ಯುವಕರು ಸಕ್ರಿಯ ಕಾರ್ಯಕರ್ತರಾಗಿ ತೊಡಗಿಕೊಂಡಿರುವ ಎಲ್ಲಾ ಕಾರ್ಯಕರ್ತರು ಈ ಕೂಡಲೇ ಸಮಾಜವನ್ನು ದೂಷಿಸುವ ಯಾವುದೇ ಪಕ್ಷಗಳಾಗಲಿ ಆ ರಾಜಕೀಯ ಪಕ್ಷಗಳಿಗೆ ರಾಜೀನಾಮೆ ನೀಡುವಂತೆ ಸಮಾಜದ ಯುವಕರಿಗೆ ಕರೆ ನೀಡಲಾಗಿದೆ. ಸಂಸದರ ಹೇಳಿಕೆಯ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.