ಸುದ್ದಿಮೂಲವಾರ್ತೆ ಕನಕಗಿರಿ,ಮಾ.೩೧-
೮೦ ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರು, ಕೋವಿಡ್ ಸೋಂಕಿತರಿಗೆ ಈ ಬಾರಿ ಚುನಾವಣಾ ಆಯೋಗ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಕನಕಗಿರಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಸಮೀರ್ ಮುಲ್ಲಾ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸೆಕ್ಟರ್ ಆಫಿಸರ್ಸ್, ಬಿಎಲ್.ಓ ಸೂಪರ್ ವೈಸರ್ಸ್ ಸೇರಿದಂತೆ ಚುನಾವಣಾ ಸಿಬ್ಬಂದಿಗಳಿಗೆ ಪೋಸ್ಟಲ್ ಬ್ಯಾಲೆಟ್ ಕುರಿತು ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿ ರಾಜ್ಯದಲ್ಲಿ ಚುನಾವಣಾ ಆಯೋಗ ವಿಕಲಚೇತನರು, ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, ಕೋವಿಡ್ ಸೋಂಕಿತ ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ವ್ಯವಸ್ಥೆಯನ್ನು ಕಲ್ಪಿಸಿದೆ. ಹಾಗಾಗಿ ಎಲ್ಲಾ ತಾವೆಲ್ಲರೂ ಕೂಡ ಇಂದಿನಿAದಲೇ ಮನೆಮನೆಗೆ ತೆರಳಿ ನಮೂನೆ ೧೨ಆ ನಲ್ಲಿ ೮೦ ವರ್ಷ ಮೇಲ್ಪಟ್ಟ ಮತದಾರರ ವಿವರಗಳನ್ನು ಪಡೆಯಬೇಕು.
ಈ ವೇಳೆ ಅವರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ತಮ್ಮ ಇಚ್ಛೆಯನ್ನು ತಿಳಿಸುತ್ತಾರೆ. ಅನಂತರ ಅವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನದ ಅವಕಾಶವನ್ನು ಕಲ್ಪಿಸಲಾಗುವುದು ಎಂದರು. ನಂತರ ಪೋಸ್ಟಲ್ ಬ್ಯಾಲೆಟ್ ಬಗ್ಗೆ ಅಧಿಕಾರಿಗಳಿಗೆ ಇದ್ದಂತಹ ಗೊಂದಲಗಳನ್ನು ನಿವಾರಿಸಿ, ಚುನಾವಣೆಯನ್ನು ಯಶಸ್ವಿಯಾಗಿ ಜರುಗಿಸಲು ಎಲ್ಲರೂ ಕೈಜೋಡಿಸಲು ತಿಳಿಸಿದರು.
ತಹಶೀಲ್ದಾರ್ ಮಹಾಂತಗೌಡ, ಸಿಡಿಪಿಓ ಶ್ವೇತಾ ಹಾಗೂ ಉಪತಹಶೀಲ್ದಾರ್ ರು, ಕಂದಾಯ ನಿರೀಕ್ಷಕರು, ಚುನಾವಣಾ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.