ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.31: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡ ಬಳಿಕ ಏ.5ರಂದು ಕರ್ನಾಟಕಕ್ಕೆ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ. ಕೋಲಾರದಿಂದ ‘ಸತ್ಯ ಮೇವ ಜಯತೆ’ ಹೋರಾಟ ಆರಂಭಿಸಲಿದ್ದು, ಈ ವೇಳೆ ಕಾಂಗ್ರೆಸ್ ಬಲ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ರಾಹುಲ್ಗಾಂಧಿ ಸಮಾವೇಶದ ಮೂಲಕ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡುವ ಉದ್ದೇಶವೂ ಹೊಂದಲಾಗಿದೆ. ಇದಕ್ಕಾಗಿ ಕೋಲಾರ ಹೊರವಲಯದ ಟಮಕ ಬಳಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ರಾಹುಲ್ ಗಾಂಧಿ ಅವರು 2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಅವರ ಪರವಾಗಿ ಕೋಲಾರದಲ್ಲಿ ಭಾಷಣ ಮಾಡುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ಇದೇ ದೂರಿನ ನಿರಂತರ ವಿಚಾರಣೆ ನಡೆದು ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರನ್ವಯ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದಿಂದ ಅನರ್ಹ ಮಾಡಲಾಗಿದೆ. ಈಗ ಅದೇ ಜಾಗದಲ್ಲಿ ನಿಂತು ‘ಸತ್ಯ ಮೇವ ಜಯತೆ’ ಕಾರ್ಯಕ್ರಮದ ಮೂಲಕ ಕಹಳೆ ಊದಲಿದ್ದಾರೆ. ಇದರ ಬಳಿಕ ರಾಹುಲ್ ಒಂದು ತಿಂಗಳು ದೇಶದಾದ್ಯಂತ ಸಂಚರಿಸಿ ‘ಸತ್ಯ ಮೇವ ಜಯತೆ’ ರ್ಯಾಲಿಗಳನ್ನು ನಡೆಸಲಿದ್ದಾರೆ.
ಇದೇ ಏಪ್ರಿಲ್ 5 ರಂದು ಕೋಲಾರದಲ್ಲಿ ನಡೆಯುವ ಸತ್ಯ ಮೇವ ಜಯತೇ ಕಾರ್ಯಕ್ರಮದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆನ ನಡೆಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ, ಮಾಜಿ ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಕೋಲಾರದಲ್ಲಿ ನಡೆಯುವ ಸಮಾವೇಶವನ್ನು ಯಶಸ್ವಿಯಾಗಿ ನಡೆಸಬೇಕು ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸಹಿತ ಹಲವು ಕಡೆಗಳಿಂದ ಸುಮಾರು ಎರಡು ಲಕ್ಷ ಜನರನ್ನು ಸೇರಿಸಬೇಕು. ಇದಕ್ಕಾಗಿ ಈ ಭಾಗದ ಎಲ್ಲಾ ನಾಯಕರು ಶ್ರಮಿಸಬೇಕು ಎಂದು ಸೂಚನೆ ನೀಡಲಾಗಿದೆ.
ಏಪ್ರಿಲ್ 5ರಂದು ರಾಹುಲ್ ಗಾಂಧಿ ಅವರು ಅದೇ ಕೋಲಾರಕ್ಕೆ ಬಂದು ಗಾಂಧೀಜಿ ಅವರ ಮೂಲ ಮಂತ್ರವಾದ ಸತ್ಯ ಮೇಯ ಜಯತೆ ಹೋರಾಟವನ್ನು ದೇಶದುದ್ದಗಲಕ್ಕೆ ಆರಂಭಿಸುತ್ತಿದ್ದಾರೆ. ನಾವು ಇಲ್ಲಿಂದಲೇ ಹೋರಾಟ ಆರಂಭಿಸಲು ಮನವಿ ಮಾಡಿದ್ದು, ಅವರು ಇಲ್ಲಿಗೆ ಆಗಮಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಎಲ್ಲಿ ಭಾಷಣ ಮಾಡಿದರೋ ಅದೇ ಭೂಮಿಯಿಂದ ಮತ್ತೆ ಪ್ರಜಾಪ್ರಭುತ್ವ ಉಳಿಸುವ, ರಾಜ್ಯ ಹಾಗೂ ದೇಶದಲ್ಲಿ ಹೊಸ ಬದಲಾವಣೆ ಗಾಳಿ ಬೀಸಲು ಹೋರಾಟ ಮಾಡಲಿದ್ದಾರೆ. ಬಿಜೆಪಿ ಅಧಿಕಾರ ದುರ್ಬಳಕೆ ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ರಾಹುಲ್ ಗಾಂಧಿ ಅವರು ದೇಶದಾದ್ಯಂತ ಪಾದಯಾತ್ರೆ ಮಾಡಿ ಜನರ ಮನ ಗೆದ್ದಿರುವುದಕ್ಕೆ ಬಿಜೆಪಿಯವರು ಈ ಸ್ಥಿತಿ ತಂದಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು.