ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.31: ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಸಂಬಂಧ ಬಿಜೆಪಿ ಬೆಂಗಳೂರು ಹೊರವಲಯದ ರೆಸಾರ್ಟ್ನಲ್ಲಿ ಎರಡು ದಿನಗಳ ಸಭೆ ಕರೆದಿದೆ.
ನೆಲಮಂಗಲದ ಗೋಲ್ಡನ್ಪಾಮ್ ರೆಸಾರ್ಟ್ನಲ್ಲಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸಹಿತ ಹಲವು ಮುಖಂಡರು ಗೌಪ್ಯ ಸಭೆ ನಡೆಸಲಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಬಿಜೆಪಿ ಜಿಲ್ಲಾ ಕೋರ್ಕಮಿಟಿ ಸಭೆ ನಡೆಸಲಾಯಿತು. ಇದರ ಜೊತೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಹುತೇಕ ಜಿಲ್ಲೆಗಳಲ್ಲಿ ಸಭೆ ನಡೆದಿದೆ. ಅಲ್ಲಿ ಸಂಗ್ರಹವಾದ ಅಭಿಪ್ರಾಯಗಳನ್ನು ಬೆಂಗಳೂರಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಎರಡು ದಿನದ ಸಭೆಯಲ್ಲಿ ಪ್ರಮುಖವಾಗಿ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ವೀಕ್ಷಕರು ಇಂದು ಬ್ಯಾಲೆಟ್ ಪೇಪರ್ ಮೂಲಕ ಪ್ರತಿ ಕ್ಷೇತ್ರದಲ್ಲೂ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮಂಡಲ ಅಧ್ಯಕ್ಷರು, ತಾಲೂಕು ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು ರಹಸ್ಯವಾಗಿ ಅಭಿಪ್ರಾಯ ದಾಖಲಿಸಲಿದ್ದಾರೆ. ಬಳಿಕ ಇದನ್ನು ಬೆಂಗಳೂರಿಗೆ ರವಾನೆ ಮಾಡಿ ಸಭೆಯಲ್ಲಿ ಅಭಿಪ್ರಾಯದ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಇತ್ತೀಚೆಗೆ (ಮಾರ್ಚ್ 27) ರಾಜ್ಯ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಹಾಗೂ ಕೋರ್ ಕಮಿಟಿ ಸಭೆ ನಡೆದಿತ್ತು. ಈ ವೇಳೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಸಲಾಗಿತ್ತು. ಅಲ್ಲದೆ, ಮಾರ್ಚ್ 31 ರಂದು ಕೋರ್ ಕಮಿಟಿ ಸದಸ್ಯರೊಂದಿಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು.
ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಆದರೆ ಬಿಜೆಪಿ ಅಭ್ಯರ್ಥಿ ಪಟ್ಟಿ ಇನ್ನು ರಾಜ್ಯದಿಂದ ದೆಹಲಿಗೆ ರವಾನೆಯಾಗಿಲ್ಲ. ವರಿಷ್ಠರ ಸೂಚನೆಯಂತೆ ಜಿಲ್ಲಾ ಸಮಿತಿಗಳಿಂದ ಪ್ರತಿ ಕ್ಷೇತ್ರದಿಂದ ಮೂರು ಹೆಸರುಗಳನ್ನು ಪಡೆದುಕೊಂಡಿರುವ ರಾಜ್ಯ ಘಟಕ ಇದೀಗ ಪ್ರತಿ ಕ್ಷೇತ್ರದಿಂದ 2 ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಕಳುಹಿಸಿಕೊಡಬೇಕಿದೆ. ಈಗಾಗಲೇ ರಾಜ್ಯ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್ 8 ರಂದು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.